ನವದೆಹಲಿ: ಪೆಗಾಸಸ್ ಹ್ಯಾಕಿಂಗ್ ವಿರುದ್ಧದ ಊಹಾಪೋಹ, ಸಂಶಯ ಮತ್ತು ಆಧಾರರಹಿತ ಮಾಧ್ಯಮ ವರದಿಗಳನ್ನು ಆಧರಿಸಿ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಸರ್ಕಾರ ಎರಡು ಪುಟಗಳ ಅಫಿಡವಿಟ್ ಸಲ್ಲಿಸಿದೆ. ಸಂಸತ್ತಿನಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪೆಗಾಸಸ್ ಆರೋಪಗಳ ಕುರಿತು ಸರ್ಕಾರದ ನಿಲುವು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಹೇಳಿದೆ.
ಪೆಗಾಸಸ್ ಸಮಸ್ಯೆಯ ಎಲ್ಲ ಅಂಶಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ಸ್ಥಾಪಿಸಲು ಕೇಂದ್ರವು ಚಿಂತನೆ ನಡೆಸುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದೆ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಸ್ಪೈವೇರ್ ಅನ್ನು ಬಳಸಲಾಗಿದೆ ಎಂಬ ಆರೋಪಗಳನ್ನು ಪೆಗಾಸಸ್ ನಿರಾಕರಿಸಿದೆ. ಇವು ಕೇವಲ ಊಹಾಪೋಹಗಳು ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯಗಳಲ್ಲಿ ಹುದ್ದೆ ಭರ್ತಿಯಾಗದಿದ್ದಕ್ಕೆ ಅಸಮಾಧಾನ
ನ್ಯಾಯಾಲಯಗಳಲ್ಲಿ ನೇಮಕಾತಿ ವಿಳಂಬ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಕಳೆದೊಂದು ವರ್ಷದಿಂದ ಹೇಳಿದ್ದನ್ನೇ ಹೇಳುತ್ತಿದೆ. ಕೋರ್ಟ್ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.10 ದಿನಗಳಲ್ಲಿ ನ್ಯಾಯಮಂಡಳಿಗಳಲ್ಲಿ ನೇಮಕಾತಿಗಳನ್ನು ಮಾಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.