ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಕೃಷಿ ಕಾನೂನುಗಳ ಬಗ್ಗೆ ಕಾಂಗ್ರೆಸ್ ಸಂಸದರು ಬುಧವಾರ ಕೇಂದ್ರ ಸರ್ಕಾರವನ್ನು ದೂಷಿಸಿದರು. ಈ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಪ್ರಶ್ನೆ ಕೇಳುವ ಹಕ್ಕನ್ನು ವಂಚಿಸಿದೆ ಮತ್ತು ನಿರಾಕರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, "ಭಾರತದ ಇತಿಹಾಸದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇದುವರೆಗೆ ದುಬಾರಿಯಾಗಿರಲಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಮಾರಾಟವಾಗುತ್ತಿದ್ದ ಸೀಮೆಎಣ್ಣೆಯ ಬೆಲೆ ಈಗ ಆಕಾಶವನ್ನು ಮುಟ್ಟುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.