ನವದೆಹಲಿ: ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರಗಿಡುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಸದರಿ ಸಮುದಾಯಗಳು ಯಾವುದೇ ದಬ್ಬಾಳಿಕೆ ಮತ್ತು ಹಿಂದುಳಿದಿರುವಿಕೆ ಎದುರಿಸುತ್ತಿಲ್ಲ ಎಂದು ಹೇಳಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 1950 ರ ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶದಲ್ಲಿ ಯಾವುದೇ ಅಸಂವಿಧಾನಿಕತೆ ಇಲ್ಲ ಎಂದು ವಾದಿಸಿದೆ. ಇನ್ಮುಂದೆ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರು ಪರಿಶಿಷ್ಟ ಜಾತಿಗಳಿಗೆ ಅರ್ಹರಾಗಿರುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ನಲ್ಲಿ ಹೇಳಿದೆ.
ಪರಿಶಿಷ್ಟ ಜಾತಿಗಳ ಗುರುತಿಸುವಿಕೆಯು ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ, 1950 ರಲ್ಲಿ ಗುರುತಿಸಲಾದ ಸಮುದಾಯಗಳಿಗೆ ಸೀಮಿತವಾದ ನಿರ್ದಿಷ್ಟ ಸಾಮಾಜಿಕ ಕಳಂಕದ ಸುತ್ತ ಕೇಂದ್ರೀಕೃತವಾಗಿದೆ ಎಂದು ಕೇಂದ್ರವು ಹೇಳಿದೆ. ಎನ್‌ಜಿಒ ವೊಂದು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯಗಳ ಜನರಿಗೆ ಮೀಸಲಾತಿ ಮತ್ತು ಇತರ ಪ್ರಯೋಜನಗಳನ್ನು ವಿಸ್ತಸುವಂತೆ ಕೋರಿ ಎನ್ಜಿಒವೊಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.