ಜೈಸಲ್ಮೇರ್(ರಾಜಸ್ಥಾನ):ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತೆಯೇ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ದೇಶದ ಗಡಿ ಕಾಯುವ ಪ್ರಮುಖ ಪಡೆಯಾದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧರಿಗೆ ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಒದಗಿಸಲು ಸರ್ಕಾರ ಸಿದ್ಧ ಎಂದು ಗೃಹ ಸಚಿವ ಅಮಿತ್ ಶಾ ಅಭಯ ನೀಡಿದರು.
ರಾಜಸ್ತಾನದ ಜೈಸಲ್ಮೇರ್ನಲ್ಲಿ ನಡೆದ ಬಿಎಸ್‌ಎಫ್‌ನ 57ನೇ ಪುನರುತ್ಥಾನ ದಿನವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಿಎಸ್ಎಫ್ ಭದ್ರತಾ ಪಡೆಗಳ ಮೊದಲ ಸಾಲಿನಲ್ಲಿದೆ. ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತೆಯೇ ರಾಷ್ಟ್ರೀಯ ಭದ್ರತೆಯಾಗಿದೆ. ಅದಕ್ಕಾಗಿ ಬಿಎಸ್ಎಫ್ ಯೋಧರಿಗೆ ವಿಶ್ವದ ಅತ್ಯುನ್ನತ ತಂತ್ರಜ್ಞಾನಾಧಾರಿತ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ವಾಗ್ದಾನ ಮಾಡಿದರು.
2014ರಿಂದ ದೇಶದ ಗಡಿ ಭದ್ರತೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಶದ ಗಡಿಯಲ್ಲಿ ವಿರೋಧಿಗಳಿಂದ ಎಲ್ಲೇ ಅತಿಕ್ರಮಣ ಯತ್ನ ನಡೆದರೂ ತಕ್ಷಣವೇ ಅಲ್ಲಿ ನಮ್ಮ ಸೇನಾಪಡೆಗಳು ಪ್ರತಿದಾಳಿ ನಡೆಸಿವೆ. ದೇಶದ ಪೊಲೀಸ್ ಪಡೆ, ಬಿಎಸ್‌ಎಫ್ ಮತ್ತು ಸಿಎಪಿಎಫ್‌ನ 35,000 ಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.