ನವದೆಹಲಿ: ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಮತ್ತು ನಗದು ವಿನಿಮಯ (ಎನ್‌ಕ್ಯಾಶ್)ಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)ಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ನವೆಂಬರ್ 6ರಿಂದ ನವೆಂಬರ್ 20ರವರೆಗೆ ತನ್ನ 29 ಅಧಿಕೃತ ಶಾಖೆಗಳ ಮೂಲಕ ಚುನಾವಣಾ ಬಾಂಡ್‌ಗಳ ವಿತರಣೆ ಹಾಗೂ ಎನ್‌ಕ್ಯಾಶ್ ಮಾಡಲು ಅನುಮೋದನೆ ನೀಡಲಾಗಿದೆ.
ರಾಜಕೀಯ ನಿಧಿಯ ಮೂಲವಾಗಿರುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರದಿಂದ ಪ್ರಕಟಣೆ ಹೊರಬಿದ್ದಿದೆ. ಚುನಾವಣಾ ಬಾಂಡ್‌ಗಳು ಬಿಡುಗಡೆಯಾದ ದಿನಾಂಕದಿಂದ 15 ಕ್ಯಾಲೆಂಡರ್ ದಿನಗಳವರೆಗೆ ಮಾನ್ಯವಾಗಿರುತ್ತವೆ. ಸಿಂಧುತ್ವದ ಅವಧಿ ಮುಗಿದ ನಂತರ ಚುನಾವಣಾ ಬಾಂಡ್ ಠೇವಣಿ ಮಾಡಿದರೆ ಯಾವುದೇ ಪಾವತಿದಾರ ರಾಜಕೀಯ ಪಕ್ಷಕ್ಕೆ ಯಾವುದೇ ಪಾವತಿ ಮಾಡಲು ಆಗುವುದಿಲ್ಲ ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅರ್ಹ ರಾಜಕೀಯ ಪಕ್ಷವು ತನ್ನ ಖಾತೆಯಲ್ಲಿ ಠೇವಣಿ ಮಾಡಿದ ಚುನಾವಣಾ ಬಾಂಡ್ ಅನ್ನು ಅದೇ ದಿನದಲ್ಲಿ ಜಮಾ ಮಾಡಲಾಗುತ್ತದೆ. ಚುನಾವಣಾ ಬಾಂಡ್‌ಗಳ ಯೋಜನೆಯ ನಿಬಂಧನೆಗಳ ಪ್ರಕಾರ, ಅಂತಹ ಬಾಂಡ್‌ಗಳನ್ನು ಒಬ್ಬ ವ್ಯಕ್ತಿ ಭಾರತದ ಪ್ರಜೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ವ್ಯಕ್ತಿಯಿಂದ ಖರೀದಿಸಬಹುದು. ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು ಎಂದು ಹೇಳಿದೆ.
ಇದನ್ನೂ ಓದಿ:ರಾಜಕೀಯ ಪಕ್ಷಗಳ ಹಣದ ಮೂಲ ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ: ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಅಫಿಡವಿಟ್