ನವದೆಹಲಿ: ಕಳೆದ ಕೆಲ ದಿನಗಳಿಂದ ಗಂಗಾ ಹಾಗೂ ಅದರ ಉಪನದಿಗಳಲ್ಲಿ ಮೃತದೇಹ ತೇಲಿ ಬರುತ್ತಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಮೃತದೇಹ ಎಸೆಯುವುದನ್ನ ತಡೆಯುವಂತೆ ನಿರ್ದೇಶನ ನೀಡಿದ್ದು, ಆರೋಗ್ಯ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ನೀರಿನ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದಿದೆ. ಜತೆಗೆ ನದಿಗಳಲ್ಲಿ ತೇಲಿ ಬಂದಿರುವ ಮೃತದೇಹಗಳನ್ನ ಗೌರಯುತವಾಗಿ ಅಂತ್ಯಕ್ರಿಯೆ ನಡೆಸಿ ಎಂದಿದೆ. ಮೇ 15-16ರಂದು ನಡೆದ ಪರಿಶೀಲನಾ ಸಭೆಯಲ್ಲಿ ಗಂಗಾ ಮತ್ತು ಅದರ ಉಪನದಿಗಳಲ್ಲಿ ಮೃತದೇಹ ಕಂಡು ಬಂದಿದ್ದು, ಇದು ಅತ್ಯಂತ ಆತಂಕಕಾರಿ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಉಭಯ ರಾಜ್ಯಗಳಿಗೆ ನೋಟಿಸ್ ಸಹ ಜಾರಿ ಮಾಡಿದ್ದು, ಇದು ಶುದ್ಧ ಗಂಗಾ ಯೋಜನೆ ರಾಷ್ಟ್ರೀಯ ಮಿಶನ್ ಮಾರ್ಗದರ್ಶಿಯ ಸ್ಪಷ್ಟ ಉಲ್ಲಂಘನೆ ಎಂದು ತಿಳಿಸಿದೆ. ಗಂಗೆಯಲ್ಲಿ ಮೃತದೇಹ ಎಸೆಯುವುದನ್ನ ತಡೆಗಟ್ಟಲು ಮತ್ತು ಅವುಗಳ ಸುರಕ್ಷಿತ ವಿಲೇವಾರಿಗೆ ಗಮನಹರಿಸುವಂತೆ ರಾಜ್ಯಗಳಿಗೆ ಕೇಂದ್ರ ಜಲ ಶಕ್ತಿ ಸಚಿವಾಲಯ ತಿಳಿಸಿದೆ. ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ತ್ವರಿತ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಇದನ್ನೂ ಓದಿ: ಶಾಕಿಂಗ್ ವಿಡಿಯೋ : ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹ ತಿಂದ ಶ್ವಾನಗಳು
ಪ್ರಮುಖವಾಗಿ ಉತ್ತರ ಪ್ರದೇಶದ ಉನ್ನಾವೋ, ಕಾನ್ಪುರ್, ಗಾಜಿಪುರ ಮತ್ತು ಬಾಲಿಯಾ ಹಾಗೂ ಬಿಹಾರದ ಬಕ್ಸಾರ್, ಸರನ್ ಮುಂತಾದ ಜಿಲ್ಲೆಗಳಲ್ಲಿನ ಗಂಗಾ ನದಿಯಲ್ಲಿ ಮೃತದೇಹಗಳು ಕಂಡು ಬಂದಿದ್ದವು. ಇದು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.