ನವದೆಹಲಿ: ಜಗತ್ತಿನಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು ವೈದ್ಯಕೀಯ ಸೌಲಭ್ಯದ ಅಗತ್ಯತೆಗಳನ್ನು ಪೂರೈಸಲು ಮಂಗಳವಾರ ಎಲ್ಲ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ (ಮಾಕ್ ಡ್ರಿಲ್) ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಶನಿವಾರ ರಾಜ್ಯಗಳಿಗೆ ಪತ್ರ ಬರೆದಿದ್ದು, ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಪ್ರಕರಣಗಳನ್ನು ಎದುರಿಸಲು ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆದ್ದರಿಂದ, ಮಂಗಳವಾರ (ಡಿಸೆಂಬರ್ 27) ದೇಶಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ (ಕೋವಿಡ್‌ಗೆ ಮೀಸಲಾದ ಆರೋಗ್ಯ ಸಂಸ್ಥೆಗಳೂ ಸೇರಿ) ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಲು ಈ ಆರೋಗ್ಯ ಸಂಸ್ಥೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮಾಲೋಚನೆ ನಡೆಸಿ ಆಯಾ ಜಿಲ್ಲೆಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಣಕು ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಕೋವಿಡ್ ತಡೆಗೆ ಬೇಕಿರುವ ಅಗತ್ಯತೆಗಳನ್ನು ಪೂರೈಸಲು ಎಲ್ಲಾ ಜಿಲ್ಲೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಅಣಕು ಕಾರ್ಯಾಚರಣೆಯೂ ಕೋವಿಡ್ ಆರೋಗ್ಯ ಸೌಲಭ್ಯಗಳ ಸನ್ನದ್ಧತೆಗೆ ನಿರ್ಣಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಸುಸಜ್ಜಿತ ಆರೋಗ್ಯದ ಪರಿಕರಗಳ ಲಭ್ಯತೆ: ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಭೌಗೋಳಿಕವಾಗಿ ಆರೋಗ್ಯ ಸೌಲಭ್ಯಗಳ ಪ್ರಾತಿನಿಧಿಕ ಲಭ್ಯತೆ, ಹಾಸಿಗೆ ಸಾಮರ್ಥ್ಯಗಳು, ಪ್ರತ್ಯೇಕ ಹಾಸಿಗೆಗಳು, ಆಮ್ಲಜನಕ-ಬೆಂಬಲಿತ ಪ್ರತ್ಯೇಕ ಹಾಸಿಗೆಗಳು, ICU ಹಾಸಿಗೆಗಳ ಲಭ್ಯತೆ ಬಗ್ಗೆ ಗಮನಹರಿಸಬೇಕು. ವೆಂಟಿಲೇಟರ್ ಹಾಸಿಗೆಗಳು ಮತ್ತು ವೈದ್ಯರು, ದಾದಿಯರು, ಅರೆವೈದ್ಯರು, ಆಯುಷ್ ವೈದ್ಯರು ಮತ್ತು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರಂತಹ ಇತರ ಮುಂಚೂಣಿ ಕೆಲಸಗಾರರ ಅತ್ಯುತ್ತಮ ಲಭ್ಯತೆ ಖಚಿತಪಡಿಸಬೇಕು ಎಂದು ಹೇಳಲಾಗಿದೆ.
ಇದನ್ನೂಓದಿ:ಒಮಿಕ್ರಾನ್ ಬಿಎಫ್.7 : ಜಾಗ್ರತೆ ವಹಿಸಿ.. ಮುನ್ನೆಚ್ಚರಿಕೆ ಮರೆಯದಿರಿ