ಕರ್ನಾಟಕ

karnataka

ETV Bharat / bharat

ಗ್ರಾಹಕರಿಗೆ ರಿಲೀಫ್... ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸಲು ನಾಫೆಡ್, ಎನ್‌ಸಿಸಿಎಫ್‌ಗೆ ಕೇಂದ್ರದ ಸೂಚನೆ.. - etv bharat kannda

ಶುಕ್ರವಾರದಿಂದ ದೆಹಲಿಯ ಎನ್​ಸಿಆರ್ ಪ್ರದೇಶದ ಗ್ರಾಹಕರಿಗೆ ಚಿಲ್ಲರೆ ಮಳಿಗೆಗಳ ಮೂಲಕ ರಿಯಾಯಿತಿ ದರದಲ್ಲಿ ಟೊಮೆಟೊ ವಿತರಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

centre-asks-nafed-nccf-to-procure-tomatoes-from-andhra-karnataka-maharashtra
tomato price hike: ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸಲು ನಾಫೆಡ್, ಎನ್‌ಸಿಸಿಎಫ್‌ಗೆ ಕೇಂದ್ರ ಸೂಚನೆ

By

Published : Jul 12, 2023, 9:17 PM IST

Updated : Jul 12, 2023, 9:48 PM IST

ನವದೆಹಲಿ: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಟೊಮೆಟೊ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಲು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸುವಂತೆ ಕೇಂದ್ರ ಸರ್ಕಾರ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್)ಗೆ ಬುಧವಾರ ನಿರ್ದೇಶನ ನೀಡಿದೆ.

'ಕ್ವೀನ್ ಆಫ್ ಕಿಚನ್' ಎಂದು ಕರೆಯಲ್ಪಡುವ ಟೊಮೆಟೊದ ಚಿಲ್ಲರೆ ಬೆಲೆಯೂ ಭಾರೀ ಮಳೆಯಿಂದಾಗಿ ಉಂಟಾದ ಪೂರೈಕೆ ವ್ಯತ್ಯಯದಿಂದಾಗಿ ದೇಶದ ಹಲವು ಕಡೆಗಳಲ್ಲಿ ಪ್ರತಿ ಕೆಜಿಗೆ 200 ರೂ. ಗಡಿ ದಾಟಿದೆ. ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಬರುವ ಶುಕ್ರವಾರದಿಂದ ರಾಷ್ಟ್ರೀಯ ರಾಜಧಾನಿ ದೆಹಲಿಯ ಎನ್​ಸಿಆರ್ ಪ್ರದೇಶದ ಗ್ರಾಹಕರಿಗೆ ಚಿಲ್ಲರೆ ಮಳಿಗೆಗಳ ಮೂಲಕ ರಿಯಾಯಿತಿ ದರದಲ್ಲಿ ಟೊಮೆಟೊವನ್ನು ವಿತರಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಹೀಗಾಗಿ ನ್ಯಾಫೆಡ್ ಮತ್ತು ಎನ್‌ಸಿಸಿಎಫ್ ಟೊಮ್ಯಾಟೊ ಖರೀದಿಯನ್ನು ಕೈಗೊಳ್ಳಲಿವೆ. ಟೊಮೆಟೊ ಬೆಲೆ ಹೆಚ್ಚಿರುವ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಟೊಮೆಟೊವನ್ನು ವಿತರಿಸಲಾಗುತ್ತದೆ. ಪ್ರಸ್ತುತ, ಗುಜರಾತ್, ಮಧ್ಯಪ್ರದೇಶ ಮತ್ತು ಇತರ ಕೆಲವು ರಾಜ್ಯಗಳ ಮಾರುಕಟ್ಟೆಗಳಿಗೆ ಟೊಮೆಟೊ ಹೆಚ್ಚಾಗಿ ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್ ಮತ್ತು ನಾಸಿಕ್‌ನಿಂದ ಸರಬರಾಜು ಮಾಡಲಾಗುತ್ತಿದೆ. ಇದು ಜುಲೈ ಅಂತ್ಯದವರೆಗೆ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.

ಸಚಿವಾಲಯದ ಪ್ರಕಾರ ಆಂಧ್ರಪ್ರದೇಶದ ಮದನಪಲ್ಲಿಯಿಂದ (ಚಿತ್ತೂರು) ಸಹ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಸರಬರಾಜು ಮಾಡಲಾಗುತ್ತಿದೆ. ಮತ್ತು ದೆಹಲಿಯ ಎನ್‌ಸಿಆರ್‌ಗೆ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಕೋಲಾರದಿಂದ ಟೊಮೆಟೊ ಸರಬರಾಜಾಗುತ್ತಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ಶೀಘ್ರದಲ್ಲೇ ಟೊಮೆಟೊ ಫಸಲು ಬರುವ ನಿರೀಕ್ಷೆಯಿದೆ ಮತ್ತು ಆಗಸ್ಟ್‌ನಲ್ಲಿ ನಾರಾಯಣಗಾಂವ್ ಮತ್ತು ಔರಂಗಾಬಾದ್ ವಲಯದಿಂದ ಟೊಮೆಟೊ ಮಾರುಕಟ್ಟಗೆ ಪೂರೈಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ:ಭಾರಿ ಮಳೆ.. ಹಿಮಾಚಲದಲ್ಲಿ ಟೊಮೆಟೋ ಬೆಳೆ ನಾಶ.. 120 ರಿಂದ 150ಕ್ಕೆ ಏರಿದ ಬೆಲೆ

ಕಳ್ಳರಿಂದ ಟೊಮೆಟೊ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತ‌‌‌ರು:ದಾವಣಗೆರೆಯ ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯಲಾಗುತ್ತದೆ. ಸುತ್ತಮುತ್ತಲ ಗ್ರಾಮದ‌‌ ಜಮೀನುಗಳಲ್ಲಿ ಬೆಳೆಯುವ ತರಕಾರಿ ವಿದೇಶಗಳಿಗೂ ರಫ್ತಾಗುತ್ತದೆ. ಈಗ ಟೊಮೆಟೊಗೆ ಬೆಲೆ ಪ್ರತಿ ಕೆಜಿಗೆ 100ರಿಂದ 150 ರೂಪಾಯಿವರೆಗೆ ಇದೆ. ಬೆಲೆ ಏರಿಕೆಯಾದ್ದರಿಂದ ಜಮೀನುಗಳಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ. ಹೀಗಾಗಿ ಕೊಡಗನೂರು ಗ್ರಾಮದ ರೈತರು ಶ್ವಾನಗಳೊಂದಿಗೆ ಹಗಲು, ರಾತ್ರಿ ಬೆಳೆ ರಕ್ಷಣೆ ಮಾಡುತ್ತಿದ್ದಾರೆ.

ಕೊಡಗನೂರು ಗ್ರಾಮದ ಶರಣಪ್ಪ ಹಾಗೂ ಶರತ್ ಎಂಬಿಬ್ಬರು ರೈತರು ತಲಾ ಒಂದೊಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಶ್ವಾನ ಹಾಗೂ ಇವರ ಕುಟುಂಬ ಕಾವಲಿದ್ರೂ ಕೂಡ ಐದಾರು ಬಾಕ್ಸ್ ಟೊಮೆಟೊ ಕಳ್ಳತನ‌ವಾಗಿದೆಯಂತೆ. ಕೊಡಗನೂರು ಗ್ರಾಮದ ರೈತ ಮಹಿಳೆ ಪ್ರೇಮ ಕೂಡಾ ತಮ್ಮ ಒಂದೆಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಕಾವಲು ಕಾಯುತ್ತಿದ್ದಾರೆ. ಇವರು ಈಗಾಗಲೇ 200 ಬಾಕ್ಸ್ ಟೊಮೆಟೊ ಮಾರುಕಟ್ಟೆ ತಲುಪಿಸಿದ್ದಾರೆ. ಹೊಲವನ್ನು ಇವರ ಪತಿ, ಮಕ್ಕಳು ಒಬ್ಬೊಬ್ಬರು ಒಂದೊಂದು ಪಾಳಿಯಂತೆ ಕಾವಲು ಕಾಯುತ್ತಿದ್ದಾರೆ.

Last Updated : Jul 12, 2023, 9:48 PM IST

ABOUT THE AUTHOR

...view details