ನವದೆಹಲಿ: 2021-22ರಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಒಡಿಶಾಗೆ ಕೇಂದ್ರ ಸರ್ಕಾರ 3,323.42 ಕೋಟಿ ರೂ. ಅನುದಾನ ನೀಡಿದೆ. 2020-21ರಲ್ಲಿ 812.15 ಕೋಟಿ ರೂ. ನೀಡಿತ್ತು.
ಜಲಶಕ್ತಿ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ಹಂಚಿಕೆಯ ನಾಲ್ಕು ಪಟ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದ್ದಾರೆ. ಮಾರ್ಚ್ 2024 ರೊಳಗೆ ಪ್ರತಿ ಗ್ರಾಮೀಣ ಮನೆಯಲ್ಲೂ ಕೊಳವೆ ನೀರು ಸರಬರಾಜು ಮಾಡಲು ರಾಜ್ಯಕ್ಕೆ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದೆ.
2019 ರಲ್ಲಿ ಮಿಷನ್ ಪ್ರಾರಂಭವಾದಾಗ, ದೇಶದ ಒಟ್ಟು 18.93 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ, ಕೇವಲ 3.23 ಕೋಟಿ (ಶೇಕಡಾ 17) ಮಾತ್ರ ಕೊಳವೆ ನೀರಿನ ಸಂಪರ್ಕವನ್ನು ಹೊಂದಿದ್ದವು. ಕಳೆದ 22 ತಿಂಗಳುಗಳಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದ ಅಡೆತಡೆಗಳ ಹೊರತಾಗಿಯೂ, ಜಲ ಜೀವನ್ ಮಿಷನ್ ಅನ್ನು ವೇಗದಿಂದ ಜಾರಿಗೆ ತರಲಾಗಿದೆ. 4.5 ಕೋಟಿ ಮನೆಗಳಿಗೆ ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸಲಾಗಿದೆ. ವ್ಯಾಪ್ತಿಯಲ್ಲಿ 23.5 ರಷ್ಟು ಹೆಚ್ಚಳವಾಗುವುದರೊಂದಿಗೆ, ಪ್ರಸ್ತುತ ದೇಶಾದ್ಯಂತ 7.69 ಕೋಟಿ (40.6 ಪ್ರತಿಶತ) ಗ್ರಾಮೀಣ ಕುಟುಂಬಗಳು ಟ್ಯಾಪ್ ನೀರು ಸರಬರಾಜನ್ನು ಹೊಂದಿವೆ.
ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತು ಪುದುಚೇರಿ ಟ್ಯಾಪ್ ನೀರು ಸರಬರಾಜಿನೊಂದಿಗೆ ಶೇಕಡಾ 100 ರಷ್ಟು ಮನೆಗಳ ಗುರಿಯನ್ನು ಸಾಧಿಸಿವೆ. 'ಹರ್ ಘರ್ ಜಲ್' ಆಗಿ ಮಾರ್ಪಟ್ಟಿವೆ. ಪ್ರಸ್ತುತ, 69 ಜಿಲ್ಲೆಗಳಲ್ಲಿ ಮತ್ತು 99 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ, ಪ್ರತಿ ಮನೆಯಲ್ಲೂ ಕೊಳವೆ ನೀರು ಸರಬರಾಜು ಇದೆ ಎಂದು ಸರ್ಕಾರ ತಿಳಿಸಿದೆ.