ಕರ್ನಾಟಕ

karnataka

ETV Bharat / bharat

ಝಿಕಾ ವೈರಸ್‌ನಿಂದಾಗಿ ಕೇಂದ್ರ ಹೈಅಲರ್ಟ್‌: ಕೇರಳಕ್ಕೆ ತಜ್ಞರ ತಂಡ ರವಾನೆ - ಝಿಕಾ

ಝಿಕಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಕೇಂದ್ರ ತಜ್ಞರ ಆರು ಸದಸ್ಯರ ತಂಡ ಕೇರಳಕ್ಕೆ ತೆರಳಿದೆ. ವೈರಸ್ ಹರಡುವಿಕೆಯ ಮೇಲ್ವಿಚಾರಣೆ ಮಾಡುವುದು ಸೇರಿದಂತೆ ಪ್ರಕರಣಗಳನ್ನು ನಿರ್ವಹಿಸಲು ಈ ತಂಡವು ಕೇರಳ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಮತ್ತೊಂದೆಡೆ, ಕೇರಳ ಸರ್ಕಾರ ವೈರಸ್ ನಿಯಂತ್ರಣಕ್ಕಾಗಿ ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಿದೆ.

central team of experts dispatched to kerala to monitor zika virus situation
ಝಿಕಾ ವೈರಸ್‌ನಿಂದಾಗಿ ಕೇಂದ್ರ ಹೈಅಲರ್ಟ್‌; ಕೇರಳಕ್ಕೆ ತಜ್ಞರ ತಂಡ ರವಾನೆ

By

Published : Jul 9, 2021, 10:51 PM IST

ತಿರುವನಂತಪುರಂ/ದೆಹಲಿ: ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ. ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲು ಮಂದಾಗಿದ್ದು, ಇದಕ್ಕಾಗಿ ಆರು ಸದಸ್ಯರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿ ಕೊಟ್ಟಿದೆ.

ಸಾರ್ವಜನಿಕ ಆರೋಗ್ಯ ತಜ್ಞರು, ರೋಗಶಾಸ್ತ್ರಜ್ಞರು ಮತ್ತು ಏಮ್ಸ್ ವೈದ್ಯರನ್ನು ಒಳಗೊಂಡ ಆರು ಸದಸ್ಯರ ತಂಡವು ಕೇರಳಕ್ಕೆ ತೆರಳಿ ವೈರಸ್ ಪ್ರಕರಣಗಳನ್ನು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಝಿಕಾ ವೈರಸ್‌ನ ಮೊದಲ ಪ್ರಕರಣ ತಿರುವನಂತಪುರಂನ ಪರಸ್ಸಲಾದಲ್ಲಿ ನಿನ್ನೆ ವರದಿಯಾಗಿದೆ. 24 ವರ್ಷದ ಗರ್ಭಿಣಿಗೆ ವೈರಸ್ ಇರುವುದು ಪತ್ತೆಯಾಗಿದೆ. ಮಹಿಳೆ ಇದೇ 7 ರಂದು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ವೈರಸ್‌ನ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿನ 19 ಮಂದಿ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜ್ವರ, ದದ್ದು, ತಲೆನೋವು ಮತ್ತು ಮೈಗ್ರೇನ್ ಜಿಕಾ ವೈರಸ್‌ನ ಲಕ್ಷಣಗಳಾಗಿವೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಈ ವೈರಸ್‌ಗೆ ಔಷಧಿಗಳ ಕೊರತೆಯು ಕಳವಳಕಾರಿ ಸಂಗತಿಯಾಗಿದೆ.

ವಿಶೇಷ ಕ್ರಿಯಾ ಯೋಜನೆ

ಝಿಕಾ ಹರಡುವಿಕೆಯನ್ನು ನಿಯಂತ್ರಿಸಲು ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಇದರ ಭಾಗವಾಗಿ, ಮಾದರಿಗಳನ್ನು ಪರೀಕ್ಷಿಸಲು ತುರ್ತು ಘಟಕವನ್ನು ಸ್ಥಾಪಿಸಲಾಗಿದೆ. ಗರ್ಭಿಣಿರಿಗೆ ಈ ವೈರಸ್ ಹೆಚ್ಚಿನ ಅಪಾಯವನ್ನು ತಂದೊಡ್ಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೋಗಲಕ್ಷಣಗಳನ್ನು ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ABOUT THE AUTHOR

...view details