ಚಂಡೀಗಢ:ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ಚಂಡೀಗಢಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕೇಂದ್ರಾಡಳಿತ ಪ್ರದೇಶಕ್ಕೆ ಹಲವು ಉಡುಗೊರೆಗಳನ್ನು ನೀಡಿದ್ದರು. ಅಷ್ಟೇ ಅಲ್ಲ ಗೃಹ ಸಚಿವ ಅಮಿತ್ ಶಾ ಚಂಡೀಗಢ ನೌಕರರಿಗೆ ಕೇಂದ್ರ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಘೋಷಿಸಿದ್ದರು.
ಕೇಂದ್ರ ಗೃಹ ಸಚಿವರ ಈ ಘೋಷಣೆ ಈಗ ಪಂಜಾಬ್ ನೂತನ ಸಿಎಂ ಭಗವಂತ ಮಾನ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ದೆಹಲಿಯಲ್ಲೂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಲೇ ಇದ್ದಾರೆ.
ದೆಹಲಿ ಸಿಎಂ ಹಾಗೂ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಜತೆ ಅಧಿಕಾರದ ವಿಚಾರದಲ್ಲಿ ಕಿತ್ತಾಟ ನಡೆಯುತ್ತಲೇ ಇರುತ್ತದೆ ಈಗ. ಈಗ ಅದು ಪಂಜಾಬ್ಗೂ ವಿಸ್ತರಿಸಿದಂತಿದೆ. ಯಾಕೆಂದರೆ, ಚಂಡೀಗಢ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಪಂಜಾಬ್ ಹಾಗೂ ಹರಿಯಾಣಗಳ ರಾಜಧಾನಿ ಆಗಿದೆ.
ಇಂತಹ ಹತ್ತು ಹಲವು ವಿಚಾರಗಳ ಮಧ್ಯ ಚಂಡೀಗಢಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವರು, ಚಂಡೀಗಢದ ನೌಕರರ ನಿವೃತ್ತಿ ವಯಸ್ಸನ್ನೂ ಹೆಚ್ಚಿಸುವುದಾಗಿ ಹೇಳಿದ್ದರು. ಅಮಿತ್ ಶಾ ಚಂಡೀಗಢ ಭೇಟಿ ವೇಳೆ ಮಾಡಿದ್ದ ಘೋಷಣೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲಿ ಕೇಂದ್ರ ಸೇವಾ ನಿಯಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಕೂಡಾ ಹೊರಡಿಸಿದೆ. ಈ ಹಿಂದೆ ಚಂಡೀಗಢದಲ್ಲಿ ಪಂಜಾಬ್‌ನ ಸೇವಾ ನಿಯಮಗಳು ಅನ್ವಯವಾಗುತ್ತಿದ್ದವು. ಇನ್ಮುಂದೆ ಅವು ಅಲ್ಲಿ ನಡೆಯುವುದಿಲ್ಲ.