ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಒಟ್ಟು 8.72 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 2020ರ ಮಾರ್ಚ್ 1ರಿಂದ ಇಷ್ಟೊಂದು ಹುದ್ದೆಗಳು ಖಾಲಿ ಇರುವುದಾಗಿ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.
2018-19 ಹಾಗೂ 2020-21ನೇ ಸಾಲಿನಲ್ಲಿ ಒಟ್ಟು 2,65,468 ಅಭ್ಯರ್ಥಿಗಳನ್ನ ವಿವಿಧ ಇಲಾಖೆಗಳಿಗೆ SSC, UPSC ಹಾಗೂ RRB ನೇಮಕ ಮಾಡಿಕೊಂಡಿದೆ ಎಂಬ ಮಾಹಿತಿಯನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ:ಕೇಂದ್ರ ಲೋಕಸೇವಾ ಆಯೋಗದಲ್ಲಿ 485 ಖಾಲಿ ಹುದ್ದೆ: ರಾಜ್ಯಸಭೆಯಲ್ಲಿ ಕೇಂದ್ರದ ಮಾಹಿತಿ
ಇದೇ ವಿಚಾರವಾಗಿ ಮಾತನಾಡಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ದೇಶದಲ್ಲಿ ವ್ಯಾಪಕವಾದ ನಿರುದ್ಯೋಗ ಸಮಸ್ಯೆ ಇದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಮುಚ್ಚುತ್ತಿರುವ ಕಾರಣ ಉದ್ಯೋಗ ಸಮಸ್ಯೆ ಉದ್ಭವವಾಗಿದ್ದು, ಅನೇಕ ಯುವಕರು ಸಂಕಷ್ಟದಲ್ಲಿದ್ದಾರೆ. ಸದ್ಯ ಕೇಂದ್ರದಲ್ಲಿ 9 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯಲ್ಲಿ ಶೇ. 15ರಷ್ಟು, ರಕ್ಷಣಾ ಇಲಾಖೆಯಲ್ಲಿ ಶೇ.40 ಮತ್ತು ಗೃಹ ವ್ಯವಹಾರಗಳ ಇಲಾಖೆಯಲ್ಲಿ ಶೇ. 12ರಷ್ಟು ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುಂಚಿತವಾಗಿ ಕೇಂದ್ರ ಲೋಕಸೇವಾ ಆಯೋಗದಲ್ಲಿ 485 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದರು.