ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುನುಗೋಡಿನ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧವಾಗಿರುತ್ತದೆ. ರಾಜಗೋಪಾಲ್ ರೆಡ್ಡಿ ಬಿಜೆಪಿ ಸೇರುತ್ತಾರೆ ಎಂದರೆ ಒಬ್ಬ ನಾಯಕ ಸೇರುತ್ತಾರೆ ಎಂದರ್ಥವಲ್ಲ. ಇದು ಕೆಸಿಆರ್ ಸರ್ಕಾರವನ್ನು ಉರುಳಿಸುವ ಆರಂಭ. ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ಒತ್ತಿ ಹೇಳಿದರು.
ಚುನಾವಣೆಯಲ್ಲಿ ಟಿಆರ್‌ಎಸ್‌ಗೆ ಮತ ಹಾಕಿದರೆ ಕೆಸಿಆರ್ ಆಗಲಿ, ಕೆಟಿಆರ್ ಆಗಲಿ ಸಿಎಂ ಆಗುತ್ತಾರೆ. ಆದರೆ ದಲಿತ ಮುಖ್ಯಮಂತ್ರಿ ಸಿಎಂ ಆಗುವುದಿಲ್ಲ. ಕೆಸಿಆರ್ ಅವರ ಮಗ, ಮಗಳು ಮತ್ತು ಅಳಿಯ ಅಧಿಕಾರದಲ್ಲಿದ್ದರೆ, ಬಿಜೆಪಿಗೆ ಯಾವುದೇ ತೊಂದರೆ ಇಲ್ಲ. ಆದರೆ ಅವರ ಕುಟುಂಬ ಆಡಳಿತದಿಂದ ಜನರು ಏಕೆ ಕಷ್ಟಪಡಬೇಕು?. ಹಾಗಾಗಿ ಮುನುಗೋಡಿನಲ್ಲಿ ರಾಜಗೋಪಾಲ್ ರೆಡ್ಡಿ ಅವರನ್ನು ಗೆಲ್ಲಿಸಿ ಎಂದು ಅಮಿತ್ ಶಾ ಜನರಿಗೆ ಕರೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ಮೋದಿ ನೇತೃತ್ವದಲ್ಲಿ ತೆಲಂಗಾಣ ಜನರ ಎಲ್ಲ ಆಶೋತ್ತರಗಳನ್ನು ಈಡೇರಿಸಲಾಗುವುದು. ಕೆಸಿಆರ್ ರೈತರಿಗೆ ಮೋಸ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಪ್ರಧಾನಿ ಬೆಳೆ ವಿಮೆ ಜಾರಿಯಾಗದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಳೇಶ್ವರಂ ಯೋಜನೆ ಕೆಸಿಆರ್ ಕುಟುಂಬಕ್ಕೆ ಎಟಿಎಂ. ಎಲ್ಲಾ ರಾಜ್ಯಗಳು ಎರಡು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರೆ, ಕೆಸಿಆರ್ ಮಾತ್ರ ಕಡಿಮೆ ಮಾಡಿಲ್ಲ ಎಂದು ಅಮಿತ್ ಶಾ ಹರಿಹಾಯ್ದರು.