ನವದೆಹಲಿ:ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ವಿದೇಶದಿಂದ ಹಣ ಪಡೆಯುವ ನಿಯಮವನ್ನು ಇನ್ನಷ್ಟು ಸರಳೀಕರಿಸಿದೆ. ಹೊಸ ನಿಯಮದ ಪ್ರಕಾರ ಅಧಿಕಾರಿಗಳಿಗೆ ಮಾಹಿತಿ ನೀಡದೇ ವಿದೇಶದಿಂದ 10 ಲಕ್ಷ ರೂಪಾಯಿವರೆಗೂ ಹಣ ವರ್ಗಾವಣೆ ಮಾಡಿಕೊಳ್ಳಬಹುದು.
ಇದಲ್ಲದೇ, ಈ ರೀತಿ ಪಡೆದುಕೊಂಡ ಹಣದ ಬಗ್ಗೆ 30 ದಿನಗಳೊಳಗಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಅವಧಿಯನ್ನೂ 90 ದಿನಗಳವರೆಗೆ ವಿಸ್ತರಿಸಲಾಗಿದೆ. ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ನಿಯಮಗಳು- 2022ರ ಹೊಸ ನಿಯಮಗಳ ಅಧಿಸೂಚನೆಯನ್ನು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ರಾತ್ರಿ ಹೊರಡಿಸಿದೆ.
ವಿದೇಶಿ ಕೊಡುಗೆ (ನಿಯಂತ್ರಣ) ನಿಯಮಗಳು- 2011 ರ ನಿಯಮ 6 ರಲ್ಲಿ (ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಹಣ ವರ್ಗಾವಣೆ) ನಮೂದಿಸಿದಂತೆ 1 ಲಕ್ಷ ರೂಪಾಯಿ ಜಾಗದಲ್ಲಿ 10 ಲಕ್ಷ, ಅವಧಿಗೆ ಸಂಬಂಧಿಸಿದಂತೆ 30 ದಿನದ ಬದಲು 3 ತಿಂಗಳು ಎಂದು ತಿದ್ದುಪಡಿ ಮಾಡಲಾಗಿದೆ.
ಹಿಂದಿನ ನಿಯಮವೇನು?:ಯಾವುದೇ ವ್ಯಕ್ತಿ ವಿದೇಶದಲ್ಲಿ ನೆಲೆಸಿರುವ ತನ್ನ ಸಂಬಂಧಿಕರಿಂದ ಒಂದು ವರ್ಷದಲ್ಲಿ 1 ಲಕ್ಷ ರೂಪಾಯಿಗಿಂತ ಹೆಚ್ಚು ಅಥವಾ ಅದಕ್ಕೆ ಸಮಾನವಾದ ವಿದೇಶಿ ಕೊಡುಗೆಯನ್ನು ಸ್ವೀಕರಿಸಿದರೆ ಆ ಬಗ್ಗೆ 30 ದಿನಗಳ ಒಳಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕಿತ್ತು.