ಕರ್ನಾಟಕ

karnataka

ETV Bharat / bharat

ಜೋಶಿಮಠದ ಬಿರುಕು ಬಿಟ್ಟ ಮನೆಗಳಿಂದ ಜಿನುಗುತ್ತಿರುವ ನೀರು.. ಭೂಕಂಪನಕ್ಕೆ ಕುಸಿದ ದೇವಸ್ಥಾನ - ನಿರಾಶ್ರಿತರಿಗೆ ಪರಿಹಾರ ಘೋಷಣೆ

ಜೋಶಿಮಠದಲ್ಲಿ ಮನೆಗಳ ಬಿರುಕು- ಮನೆ ಬಿರುಕು ಅಧ್ಯಯನಕ್ಕೆ ಸಮಿತಿ ರಚನೆ- ಮೂರು ದಿನದಲ್ಲಿ ವರದಿ ಕೇಳಿದ ಕೇಂದ್ರ ಸರ್ಕಾರ- ಮನೆಗಳ ಬಿರುಕಿನಲ್ಲಿ ಜಿನುಗುತ್ತಿರುವ ನೀರು

joshimath-land-subsidence
ಜೋಶಿಮಠದಲ್ಲಿ ಮನೆಗಳ ಬಿರುಕು

By

Published : Jan 7, 2023, 11:32 AM IST

ಡೆಹ್ರಾಡೂನ್:ಶಂಕರಾಚಾರ್ಯರಿಗೆ ಜ್ಞಾನೋದಯವಾದ ಸ್ಥಳವಾದ ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದಿಂದ ಮನೆಗಳು ತೀವ್ರ ಪ್ರಮಾಣದಲ್ಲಿ ಬಿರುಕು ಉಂಟಾಗುತ್ತಿರುವುದು ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ. ಇದಕ್ಕೆ ಬೇಗನೇ ಕಾರಣ ಪತ್ತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಜ್ಞರ ಸಮಿತಿ ರಚಿಸಿದ್ದು, ಮೂರು ದಿನದಲ್ಲಿ ವರದಿ ನೀಡಲು ಸೂಚಿಸಲಾಗಿದೆ. ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಮಿತಿ ರಚಿಸಲಾಗಿದೆ.

600ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು:ಜೋಶಿಮಠದಲ್ಲಿ ಗುಡ್ಡ ಕುಸಿತದಿಂದ ದಿನೇ ದಿನೇ ಅಪಾಯದ ಸ್ಥಿತಿ ನಿರ್ಮಾಣವಾಗುತ್ತಿದೆ. ಮನೆ, ರಸ್ತೆಗಳ ಬಿರುಕುಗಳು ಇನ್ನಷ್ಟು ಹೆಚ್ಚಾಗಿದೆ. 600ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಸಂತ್ರಸ್ತರನ್ನು ಮೊದಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ತಂಡಗಳು ಜೋಶಿಮಠದಲ್ಲಿ ಬೀಡುಬಿಟ್ಟಿವೆ. ಇಂದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಜೋಶಿಮಠಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ನಿರಾಶ್ರಿತರಿಗೆ ಪರಿಹಾರ ಘೋಷಣೆ:ಪ್ರಕೃತಿ ವೈಪರೀತ್ಯದಿಂದ ನಿರಾಶ್ರಿತವಾದ ಕುಟುಂಬಗಳಿಗೆ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಉತ್ತರಾಖಂಡ ಸರ್ಕಾರ ಶುಕ್ರವಾರ ಘೋಷಿಸಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳೂ ಸ್ಥಳಕ್ಕೆ ಆಗಮಿಸಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಸಿಎಂ ಆದೇಶದ ಮೇರೆಗೆ ವಿಪತ್ತು ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಬೃಹತ್ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆಯೂ ಸಿಎಂ ಧಾಮಿ ಅಧಿಕಾರಿಗಳಿ ಸೂಚನೆ ನೀಡಿದ್ದಾರೆ.

ವಿವಿಧ ಕಾಮಗಾರಿಗಳು ಸ್ಥಗಿತ:ಜೋಶಿಮಠದದಲ್ಲಿ ಭೂಕುಸಿತ ಉಂಟಾಗುತ್ತಿರುವ ಕಾರಣ ಎನ್‌ಟಿಪಿಸಿ ಪವರ್‌ ಪ್ರಾಜೆಕ್ಟ್‌ನ ಸುರಂಗ ಕಾಮಗಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಲ್ಲದೇ, ಹೇಳಂಗ್ ಬೈಪಾಸ್ ನಿರ್ಮಾಣ ಕಾಮಗಾರಿ, ಎನ್‌ಟಿಪಿಸಿಯ ತಪೋವನ ವಿಷ್ಣುಘಡ ಜಲವಿದ್ಯುತ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕಾಮಗಾರಿ ಮತ್ತು ಪುರಸಭೆ ವ್ಯಾಪ್ತಿಯ ನಿರ್ಮಾಣ ಕಾಮಗಾರಿಗಳನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಡಳಿತ ನಿಷೇಧಿಸಿದೆ.

ದೇವಸ್ಥಾನ ಕುಸಿತ:ಇಲ್ಲಿನ ದೇವಸ್ಥಾನವೊಂದು ಶುಕ್ರವಾರ ಕುಸಿದಿದ್ದರೆ ಹಲವು ಮನೆಗಳು ಕುಸಿಯುವ ಹಂತದಲ್ಲಿವೆ. ದೇವಸ್ಥಾನ ಕುಸಿತದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೀತಿಯಲ್ಲಿರುವ ಜನರನ್ನು ಅಪಾಯಕ್ಕೀಡಾದ ಮನೆಗಳಿಂದ ಪುರಸಭೆಯ ಕಟ್ಟಡಗಳು, ಗುರುದ್ವಾರಗಳು ಮತ್ತು ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕೆಲವು ಬಿರುಕುಬಿಟ್ಟ ಕಟ್ಟಡಗಳಲ್ಲಿ ನೀರು ಜಿನುಗುತ್ತಿದೆ. ತುಸು ಮಳೆಯಾದರೂ ಭೂಮಿ ದೊಡ್ಡದಾಗಿ ಬಾಯಿಬಿಡುತ್ತಿದೆ. ಇದರಲ್ಲಿ ನೀರು ತುಂಬಿಕೊಂಡು ಅಪಾಯದ ಸ್ಥಿತಿ ಹೆಚ್ಚಾಗುತ್ತಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ:ಈಗಿನ ಪರಿಸ್ಥಿತಿಗೆ ಸರ್ಕಾರವೇ ಕಾರಣ. ಸರ್ಕಾರದ ಎನ್​ಟಿಪಿಸಿ ಯೋಜನೆಯಿಂದಾಗಿಯೇ ಇಷ್ಟೆಲ್ಲಾ ಅನಾಹುತ ಉಂಟಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ. ಅಲ್ಲದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದರು. ನಾವು ಇಂದು ಈ ಪರಿಸ್ಥಿತಿಗೆ ಬರಲು ಸರ್ಕಾರದ ನಿರ್ಧಾರಗಳೇ ಕಾರಣವಾಗಿವೆ ಎಂದು ದೂರಿದರು.

ಪ್ರತಿಭಟನಾಕಾರರ ಮನವೊಲಿಸಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅಭಿಷೇಕ್ ತ್ರಿಪಾಠಿ ಸ್ಥಳಕ್ಕೆ ಆಗಮಿಸಿದ್ದರು. ಆದರೆ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಓದಿ:ಜೋಶಿಮಠದಲ್ಲಿ ಭೂಕಂಪನದಿಂದ ಬಿರುಕು ಬಿಟ್ಟ ಮನೆಗಳಿಂದ 50 ಕುಟುಂಬಗಳ ಸ್ಥಳಾಂತರ

ABOUT THE AUTHOR

...view details