ಕರ್ನಾಟಕ

karnataka

ETV Bharat / bharat

ರಾಜಕೀಯ ಪಕ್ಷಗಳ ಹಣದ ಮೂಲ ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ: ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಅಫಿಡವಿಟ್​ - electoral bond scheme

ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಹರಿದುಬರುವ ಹಣಕಾಸಿಕ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ 31ರಿಂದ ಚುನಾವಣಾ ಬಾಂಡ್​ಗಳ ಕುರಿತು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಲಿದೆ.

ಚುನಾವಣಾ ಬಾಂಡ್
ಚುನಾವಣಾ ಬಾಂಡ್

By PTI

Published : Oct 30, 2023, 9:11 PM IST

ನವದೆಹಲಿ:ರಾಜಕೀಯ ಪಕ್ಷಗಳಿಗೆ ಬರುವ ಹಣದ ಮೂಲ ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ. ರಾಜಕೀಯ ನಿಧಿ ಸಂಗ್ರಹಣೆಯ ಭಾಗವಾಗಿರುವ ಚುನಾವಣಾ ಬಾಂಡ್ ಯೋಜನೆಯು ಪಾರದರ್ಶಕ ಹಣವಾಗಿದೆ. ಇಂತಹ ಮೂಲದ ಬಗ್ಗೆ ನಾಗರಿಕರು ಮಾಹಿತಿ ಪಡೆದುಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.

ರಾಜಕೀಯ ಪಕ್ಷಗಳಿಗೆ ಬರುವ ಹಣ 'ಅಪಾರದರ್ಶಕ'ವಾಗಿದ್ದು, ಚುನಾವಣಾ ಬಾಂಡ್​ಗಳ ಮೂಲಕ ನೀಡಲಾಗುವ ದೇಣಿಗೆಯನ್ನು ಆಯಾ ಪಕ್ಷಗಳು ಬಹಿರಂಗಪಡಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ನ ಐವರು ಸದಸ್ಯರ ಸಾಂವಿಧಾನಿಕ ಪೀಠ ನಾಳೆಯಿಂದ (ಅಕ್ಟೋಬರ್​ 31) ಆರಂಭಿಸಲಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿತ್ತು.

ಸರ್ಕಾರದ ಪರವಾಗಿ ಅಟಾರ್ನಿ ಜನರಲ್​ ಆರ್​.ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​​ ಸಲ್ಲಿಸಿದ್ದು, ಅದರಲ್ಲಿ ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆ ನೀಡಲು ಅನುಕೂಲವಾಗುವ ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನು ಸಮರ್ಥಿಸಿಕೊಂಡಿದ್ದಾರೆ.

ಎಲೆಕ್ಟೋರಲ್ ಬಾಂಡ್‌ಗಳ ಯೋಜನೆಯು ದೇಣಿದಾರರ ಗೌಪ್ಯತೆ ಕಾಪಾಡುತ್ತದೆ. ಚುನಾವಣಾ ಬಾಂಡ್‌ಗಳ ಯೋಜನೆಯು ಸಂವಿಧಾನದ 19 (2) ಪರಿಚ್ಛೇದದ ವ್ಯಾಪ್ತಿಯಲ್ಲಿದೆ. ಇದು ಮೂಲಭೂತ ಹಕ್ಕುಗಳ ಮೇಲೆ ಸೂಕ್ತ ನಿರ್ಬಂಧಗಳನ್ನು ವಿಧಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಹೀಗಾಗಿ ಪಕ್ಷಗಳಿಗೆ ಬರುವ ಹಣದ ಮೂಲವನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಸಿಗುವುದಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.

ಚುನಾವಣಾ ಬಾಂಡ್ ಎಂದರೇನು?​:ಚುನಾವಣಾ ಬಾಂಡ್ ಎನ್ನುವುದು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‌ ಆಗಿದೆ. ಭಾರತದ ಪ್ರಜೆ ಅಥವಾ ದೇಶದಲ್ಲಿ ಸಂಘಟಿತವಾಗಿರುವ ಸಂಸ್ಥೆ, ಸಂಘಗಳು ಈ ಬಾಂಡ್​ ಖರೀದಿಸಬಹುದು. ಅವುಗಳು ನಿರ್ದಿಷ್ಟವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶ ಹೊಂದಿರುತ್ತವೆ.

ಅರ್ಜಿದಾರರ ವಾದವೇನು?:ಚುನಾವಣಾ ಬಾಂಡ್​ಗಳು ಭ್ರಷ್ಟಾಚಾರ ಮತ್ತು ಸರ್ಕಾರಕ್ಕೆ ತೆರಿಗೆಯನ್ನು ತಪ್ಪಿಸಲು ಅನುವು ಮಾಡಿಕೊಡುತ್ತವೆ. ಆಡಳಿತದಲ್ಲಿರುವ ಪಕ್ಷಗಳಿಗೆ ನೀಡುವ ಮೂಲಕ, ಸರ್ಕಾರದಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಿಂದ ಕಂಪನಿಗಳು ಅಥವಾ ವ್ಯಕ್ತಿ ಅನಾಮಧೇಯವಾಗಿ ದೇಣಿಗೆ ನೀಡುವುದರಿಂದ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

2016, 2017ರ ಹಣಕಾಸು ತಿದ್ದುಪಡಿ ಕಾಯ್ದೆಯ ಮೂಲಕ ಕೇಂದ್ರ ಸರ್ಕಾರ ಚುನಾವಣಾ ಬಾಂಡ್​ ಯೋಜನೆಯನ್ನು ಪರಿಚಯಿಸಿತು. ಜನವರಿ 2, 2018 ರಂದು ಸರ್ಕಾರವು ಅಧಿಸೂಚನೆ ಹೊರಡಿಸಿ ಈ ಯೋಜನೆಯನ್ನು ಜಾರಿ ಮಾಡಿತು. ಇದರ ಪ್ರಕಾರ, ಭಾರತದ ಯಾವುದೇ ನಾಗರಿಕ ಅಥವಾ ಭಾರತದಲ್ಲಿ ಸಂಘಟಿತವಾದ ಸಂಸ್ಥೆಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ಏಕ ವ್ಯಕ್ತಿ ಅಥವಾ ಜಂಟಿಯಾಗಿಯೂ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಅವಕಾಶವಿದೆ.

2018ರಲ್ಲಿ ಈ ಕುರಿತು ನಡೆದ ವಿಚಾರಣೆಯಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಯೋಜನೆಗೆ ತಡೆಯಾಜ್ಞೆ ಕೋರಿ ಎನ್‌ಜಿಒ ಸಲ್ಲಿಸಿದ ಮಧ್ಯಂತರ ಅರ್ಜಿಗೆ ಕೇಂದ್ರ ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆಗಳನ್ನು ಕೋರಿತ್ತು. ಎರಡೂ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಬಾಂಡ್​ ಪಡೆಯಲು ಪಕ್ಷಗಳಿಗೆ ಬೇಕಿರುವ ಅರ್ಹತೆಗಳೇನು?:ಪ್ರಜಾಪ್ರತಿನಿಧಿ ಕಾಯಿದೆ-1951 ರ ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳು ಲೋಕಸಭೆ ಅಥವಾ ರಾಜ್ಯದ ವಿಧಾನಸಭೆಗಳಿಗೆ ನಡೆದ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಡೆದ ಮತಗಳಲ್ಲಿ ಒಟ್ಟಾರೆ ಶೇಕಡಾ ಒಂದಕ್ಕಿಂತ ಕಡಿಮೆ ಇರಬಾರದು. ಅಂತಹ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿವೆ. ಈ ಬಾಂಡ್‌ಗಳನ್ನು ಅಧಿಕೃತ ಬ್ಯಾಂಕ್‌ನ ಖಾತೆಯ ಮೂಲಕ ಮಾತ್ರ ಎನ್‌ಕ್ಯಾಶ್ ಮಾಡಿಕೊಳ್ಳಬೇಕು.

ಇದನ್ನೂ ಓದಿ:ಚುನಾವಣಾ ಬಾಂಡ್​ಗಳ ವಿಚಾರ.. ಸುಪ್ರೀಂ ಪಂಚ ಪೀಠದಿಂದ ನಡೆಯಲಿದೆ ವಿಚಾರಣೆ

ABOUT THE AUTHOR

...view details