ಕೇಂದ್ರ ಸರ್ಕಾರಿ ನೌಕರಿಗೆ ತಯಾರಿ ನಡೆಸುತ್ತಿರುವವರಿಗೆ ಸಿಆರ್ಪಿಎಫ್ ಸಂತಸ ಸುದ್ದಿ ನೀಡಿದೆ. ಇತ್ತೀಚೆಗಷ್ಟೇ 9 ಸಾವಿರ ಹುದ್ದೆಗಳ ನೇಮಕಾತಿ ನಡೆಸಿದ ಕೇಂದ್ರಿಯ ಮೀಸಲು ಪೊಲೀಸ್ ಪಡೆ ಮತ್ತೀಗ ಹೊಸ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ CRPFನಲ್ಲಿ ಖಾಲಿ ಇರುವ 251 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಒಟ್ಟು 251 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: 27 ಸಹಾಯಕ ಸಬ್ ಇನ್ಸ್ಪೆಕ್ಟರ್ (ಸ್ಟೆನೊ), 224 ಹೆಡ್ ಕಾನ್ಸ್ಟೇಬಲ್ (ಸಚಿವಾಲಯ) ಹುದ್ದೆಗಳು.
ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಅಥವಾ ಪಿಯುಸಿ (ಪ್ಲಸ್ 2) ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಕೌಶಲ್ಯ ಹಾಗೂ ದೈಹಿಕ ಸಾಮರ್ಥ್ಯ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ (ಸ್ಟೆನೊ)ಗೆ 29,200-92,300 ಮತ್ತು ಹೆಡ್ ಕಾನ್ಸ್ಟೇಬಲ್ (ಸಚಿವಾಲಯ) 25,500-81,100 ರೂ ವೇತನ ನಿಗದಿ ಮಾಡಲಾಗಿದೆ.
ಅಭ್ಯರ್ಥಿಗಳು ಗರಿಷ್ಟ 40 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಮೇ 10ರಿಂದ ಆರಂಭವಾಗಲಿದ್ದು ಮೇ 31 ಕಡೇಯ ದಿನ. ಜುಲೈ 15ಕ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪ್ರತಿ ಬಿಡುಗಡೆಯಾಗಲಿದೆ. ತಾತ್ಕಾಲಿಕ ಪರೀಕ್ಷಾ ದಿನಾಂಕವನ್ನು ಜುಲೈ 22ರಿಂದ 28ರೊಳಗೆ ನಡೆಸುವ ಸಾಧ್ಯತೆ ಇದೆ.
ರಾಯ್ಪುರ, ಜಮ್ಮು, ಪ್ರಯಾಗ್ ರಾಜ್, ದೆಹಲಿ, ಬಿಲಸ್ಪುರ್, ಶ್ರೀನಗರ, ಹೈದರಾಬಾದ್, ಕೋಲ್ಕತ್ತಾ, ಗುವಾಹಟಿ, ಗಾಂಧಿನಗರ, ಚೆನ್ನೈ, ಅಜ್ಮೇರ್, ಇಂಫಾಲ ಮತ್ತು ಪಾಟ್ನಾದ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಇರಲಿದೆ. ಜನರಲ್ ಅಪ್ಟಿಟ್ಯೂಡ್, ಜನರಲ್ ಇಂಟೆಲಿಜೆನ್ಸ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಮಾದರಿಯ ಪ್ರಶ್ನೆಗಳಿರಲಿವೆ. 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿ 90 ನಿಮಿಷ. ಸಂಪೂರ್ಣ ವಿವರ ಸೇರಿದಂತೆ ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಸಿಆರ್ಪಿಎಫ್ ಜಾಲತಾಣ crpf.gov.ink ಕ್ಕೆ ಭೇಟಿ ನೀಡಿ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; 157 ಹುದ್ದೆಗೆ ಅರ್ಜಿ ಆಹ್ವಾನ