ನವದೆಹಲಿ:ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದು, ಸ್ಪೆಕ್ಟ್ರಮ್ ಹರಾಜು ಕೂಡ ಶೀಘ್ರದಲ್ಲೇ ನಡೆಯಲಿದೆ ಎಂದು ತಿಳಿಸಿದೆ. ಪ್ರಶ್ನೋತ್ತರ ವೇಳೆಯಲ್ಲಿ ಸದನಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಸಚಿವ ದೇವು ಸಿನ್ಹ ಚೌಹಾಣ್, ದೇಶದಲ್ಲಿ 5ಜಿ ತಂತ್ರಜ್ಞಾನ ಪ್ರಾರಂಭಕ್ಕಾಗಿ ನಾಲ್ಕು ಕಂಪನಿಗಳಿಗೆ ತರಂಗಾಂತರಗಳನ್ನು ರೂಪಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಪ್ರಯೋಗಗಳು ಪೂರ್ಣಗೊಂಡು, ದೇಶಾದ್ಯಂತ 5ಜಿ ಸೇವೆ ಜನರಿಗೆ ಸಿಗಲಿದೆ ಎಂದು ತಿಳಿಸಿದರು.
ಇನ್ನು ಭಾರಿ ನಷ್ಟದಿಂದಾಗಿ ಮುಚ್ಚುವ ಹಂತಕ್ಕೆ ತಲುಪಿರುವ ಬಿಎಸ್‌ಎನ್‌ಎಲ್ ಕೂಡ ಈ ವರ್ಷ 4 ಜಿ ಸೇವೆಯನ್ನು ಆರಂಭಿಸಲಿದೆ. ಕಳೆದ 7 ವರ್ಷಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಯಾಗಿದೆ. ಅಂತರ್ಜಾಲ ಬಳಕೆಯ ಮೇಲೆ ಸುಂಕಗಳು ಕಡಿಮೆ ಇದ್ದ ಕಾರಣ ಡೇಟಾ ಬಳಕೆಯು ಹೆಚ್ಚಿದೆ ಎಂದು ಅವರು ನೀಡಿದರು.