ನವದೆಹಲಿ:ಸೌದಿ ಅರೇಬಿಯಾ ಸರ್ಕಾರವು ಹಜ್ ಯಾತ್ರಿಕರ ಸಂಖ್ಯೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ವಿಐಪಿ ಹಜ್ ಕೋಟಾ ತೆಗೆದು ಹಾಕಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಜ್ ಯಾತ್ರೆಗೆ ಬರಬಹುದೆಂದು ಸೋಮವಾರ ಸೌದಿ ಸರ್ಕಾರ ತಿಳಿಸಿತ್ತು. ಏತನ್ಮಧ್ಯೆ, ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಭಾಗವಾಗಿ ಕೇಂದ್ರ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ವಿವೇಚನಾರಹಿತ ಕೋಟಾವನ್ನು ಪರಿಚಯಿಸಲಾಗಿತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಹಜ್ ಸಮಿತಿ ಮತ್ತು ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಎಲ್ಲರಿಗೂ ವಿಶೇಷ ಕೋಟಾವನ್ನು ನಿಗದಿಪಡಿಸಲಾಗಿತ್ತು ಎಂದು ಕೇಂದ್ರ ಹೇಳಿದೆ. ಈ ಸಂಬಂಧ ಮಾತನಾಡಿರುವ ಸಚಿವರು, ಹಜ್ ಸಮಿತಿ ಮತ್ತು ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಎಲ್ಲರಿಗೂ ವಿಶೇಷ ಕೋಟಾವನ್ನು ನಿಗದಿಪಡಿಸಲಾಗಿತ್ತು. ಈ ಕೋಟಾವನ್ನು ಕೊನೆಗೊಳಿಸುವಂತೆ ಹಜ್ ಸಮಿತಿಯನ್ನು ಒತ್ತಾಯಿಸಲಾಗಿದೆ. ವಿವಿಧ ರಾಜ್ಯಗಳ ಎಲ್ಲಾ ಹಜ್ ಸಮಿತಿಗಳು ಇದನ್ನು ಬೆಂಬಲಿಸಿವೆ. ಈ ವಿಐಪಿ ಸಂಸ್ಕೃತಿಯನ್ನು ಹಜ್ ಪ್ರಕ್ರಿಯೆಯಲ್ಲಿ ಕೊನೆಗೊಳಿಸಲಾಗಿದೆ ಎಂದು ತಿಳಿಸಿದರು.
ಕೋಟಾದಡಿ 500 ಸೀಟು ಮೀಸಲು: 2012ರಲ್ಲಿ ವಿಐಪಿ ಕೋಟಾವನ್ನು ಪ್ರಾರಂಭಿಸಲಾಗಿತ್ತು. ವಿಶೇಷ ಕೋಟಾದ ಅಡಿಯಲ್ಲಿ ಸುಮಾರು 500 ಸೀಟುಗಳಿದ್ದವು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಅಲ್ಪ ಸಂಖ್ಯಾತ ಸಚಿವರು ಮತ್ತು ಹಜ್ ಕಮಿಟಿಯಡಿ ಕೋಟಾದಡಿ 500 ಜನರು ಹಜ್ ಯಾತ್ರೆ ನಡೆಸಬಹುದಿತ್ತು. ರಾಷ್ಟ್ರಪತಿ ಕೋಟಾದಲ್ಲಿ 100, ಉಪರಾಷ್ಟ್ರಪತಿ ಕೋಟಾದಲ್ಲಿ 75, ಪಿಎಂ ಕೋಟಾದಲ್ಲಿ 75 ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೋಟಾದಲ್ಲಿ 50 ಸೀಟುಗಳಿದ್ದವು. ಭಾರತದ ಹಜ್ ಸಮಿತಿಯ 200 ಸ್ಥಾನಗಳನ್ನೂ ಇದು ಹೊಂದಿತ್ತು. ಈ ವಿಐಪಿ ಕೋಟಾ ರದ್ದು ಮಾಡಿದ ಹಿನ್ನೆಲೆಯಲ್ಲಿ ಈಗ ಹಜ್ ಯಾತ್ರೆ ನಡೆಸುವವರು ಹಜ್ ಸಮಿತಿ ಮತ್ತು ಖಾಸಗಿ ಟೂರ್ ಅಪರೇಟರ್ ಅಡಿ ಯಾತ್ರೆ ನಡೆಸಬಹುದಾಗಿದೆ.