ಕರ್ನಾಟಕ

karnataka

ETV Bharat / bharat

ಪಾಕಿಸ್ತಾನಿ ಉಗ್ರರ ಜೊತೆ ನಂಟು: ಭಾರತದಲ್ಲಿ 14 ವಿದೇಶಿ ಆ್ಯಪ್​ಗಳು ಬ್ಯಾನ್​ - app Using to communicate with terrorists

ಪಾಕಿಸ್ತಾನಿ ಭಯೋತ್ಪಾದಕರ ಜೊತೆಗೆ ಸಂವಹನ ಸಾಧಿಸುತ್ತಿದ್ದ ಮೊಬೈಲ್​ ಆ್ಯಪ್​ಗಳ ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಭಾರತದಲ್ಲಿ 14 ವಿದೇಶಿ ಆ್ಯಪ್​ಗಳು ಬ್ಯಾನ್​
ಭಾರತದಲ್ಲಿ 14 ವಿದೇಶಿ ಆ್ಯಪ್​ಗಳು ಬ್ಯಾನ್​

By

Published : May 1, 2023, 12:25 PM IST

ನವದೆಹಲಿ:ಪಾಕಿಸ್ತಾನದ ಜೊತೆ ನಂಟು ಹೊಂದಿದ್ದ 14 ವಿದೇಶಿ ಮೊಬೈಲ್​ ಮೆಸೆಂಜರ್​ ಆ್ಯಪ್​ಗಳ ಮೇಲೆ ಕೇಂದ್ರ ಸರ್ಕಾರ ಸೋಮವಾರ ನಿರ್ಬಂಧ ಹೇರಿದೆ. ಭಯೋತ್ಪಾದಕ ಗುಂಪುಗಳ ಜೊತೆಗೆ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದ ಮಾಹಿತಿಯ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ.

ಭಾರತದಲ್ಲಿ ಬಳಕೆಯಲ್ಲಿದ್ದ ಈ ನಿಷೇಧಿತ ಆ್ಯಪ್​ಗಳು ದೇಶ ವಿರೋಧಿಗಳ ಜೊತೆ ನಂಟು ಹೊಂದಿದ್ದನ್ನು ರಕ್ಷಣಾ ಪಡೆಗಳು, ಭದ್ರತೆ, ಗುಪ್ತಚರ ಮತ್ತು ತನಿಖಾ ಸಂಸ್ಥೆಗಳು ಪತ್ತೆ ಮಾಡಿದ್ದರು. ಹೀಗಾಗಿ ದೇಶದಲ್ಲಿ ಈ ಆ್ಯಪ್​ಗಳ ಬಳಕೆ ನಿಷೇಧಿಸುವಂತೆ ಮಾಡಿದ ಶಿಫಾರಸಿನ ಮೇರೆಗೆ ಬಳಕೆಗೆ ತಿಲಾಂಜಲಿ ಇಡಲಾಗಿದೆ.

ನಿಷೇಧಿಸಲಾದ ಆ್ಯಪ್​ಗಳು ಭಾರತದಲ್ಲಿ ಯಾವುದೇ ಕಚೇರಿಯನ್ನು ಹೊಂದಿಲ್ಲ. ಈ ಆ್ಯಪ್‌ಗಳನ್ನು ಪಾಕಿಸ್ತಾನಿ ಭಯೋತ್ಪಾದಕರು ತಮ್ಮ ಬೆಂಬಲಿಗರು ಮತ್ತು ಕಾಶ್ಮೀರದಲ್ಲಿರುವ ತಮ್ಮ ಏಜೆಂಟರ ಜೊತೆ ಸಂವಹನ ನಡೆಸಲು ಬಳಕೆ ಮಾಡುತ್ತಿದ್ದರು ಎಂದು ಭದ್ರತಾ ಏಜೆನ್ಸಿಗಳು ಬಯಲಿಗೆಳೆದಿವೆ. ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಅಪ್ಲಿಕೇಶನ್ ಡೆವಲಪರ್‌ಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ್ಯೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ.

ಅನಾಮಧೇಯವಾಗಿ ದೇಶದಲ್ಲಿ ಚಾಲ್ತಿಯಲ್ಲಿದ್ದ ಆ್ಯಪ್​ಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವು. ಭಾರತದಲ್ಲಿ ಯಾವುದೇ ಕಚೇರಿಯನ್ನೂ ಅವುಗಳು ಹೊಂದಿಲ್ಲ. ಹೀಗಾಗಿ ಭದ್ರತಾ ಏಜೆನ್ಸಿಗಳಿಗೆ ಇವುಗಳ ಬಳಕೆದಾರರನ್ನು ಪತ್ತೆ ಹಚ್ಚಲು ಕಷ್ಟವಾಗಿತ್ತು.

ಇದಕ್ಕೂ ಮುನ್ನ ಏಪ್ರಿಲ್ 20 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ರಾಜೌರಿ ಸೆಕ್ಟರ್‌ನ ಭಿಂಬರ್ ಗಲಿ ಮತ್ತು ಪೂಂಚ್ ನಡುವೆ ಸೇನಾ ಟ್ರಕ್‌ನಲ್ಲಿ ಯೋಧರು ಪ್ರಯಾಣಿಸುತ್ತಿದ್ದಾಗ ಉಗ್ರರು ವಾಹನದ ಮೇಲೆ ಗ್ರೆನೇಡ್‌ಗಳಿಂದ ದಾಳಿ ನಡೆಸಿದ್ದಾರೆ. ದಾಳಿಯ ನಂತರ ಭದ್ರತಾ ಪಡೆಗಳು ಭಾರಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಅಪರಿಚಿತ ಭಯೋತ್ಪಾದಕರು ಪತ್ತೆಯಾಗಿಲ್ಲ.

ನಿಷೇಧಿಸಲಾದ ಆ್ಯಪ್‌ಗಳಿವು..:ಸಂದೇಶ ರವಾನೆ ಮತ್ತು ಸ್ವೀಕರಿಸುವ ಆ್ಯಪ್​ಗಳಾದ ಕ್ರಿಪ್‌ವೈಸರ್, ಎನಿಗ್ಮಾ, ಸೇಫ್‌ಸ್ವಿಸ್, ವಿಕ್ರಿಮೆ, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂದ್​ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಂಗಿ, ಥ್ರೀಮಾ ಸೇರಿದಂತೆ 14 ಅಪ್ಲಿಕೇಶನ್​ಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ-2000 ರ ಸೆಕ್ಷನ್ 69A ಅಡಿಯಲ್ಲಿ ಭಾರತದಲ್ಲಿ ಬಳಕೆಗೆ ನಿಷೇಧಿಸಲಾಗಿದೆ.

ಚೀನಿ ಆ್ಯಪ್​ಗಳ ನಿಷೇಧ:ದೇಶದ ಭದ್ರತೆಗೆ ಕಂಟಕ ಮತ್ತು ಮಾಹಿತಿ ಸೋರಿಕೆ ಮಾಡುತ್ತಿರುವ ಆರೋಪದ ಮೇಲೆ ಈಗಾಗಲೇ ನೂರಾರು ಚೀನೀ ಆ್ಯಪ್​ಗಳನ್ನು ಭಾರತ ಸರ್ಕಾರ ಈಗಾಗಲೇ ನಿಷೇಧಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ PUBG ಮತ್ತು ಟಿಕ್‌ಟಾಕ್ ಒಳಗೊಂಡಂತೆ 224 ಚೀನಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಇವುಗಳು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿವೆ ಎಂಬ ಆರೋಪ ಹೊತ್ತಿವೆ.

ಪಾಕಿಸ್ತಾನಿ ಭಯೋತ್ಪಾದಕರ ಜೊತೆಗೆ ಸಂವಹನ ನಡೆಸುತ್ತಿದ್ದ ಆ್ಯಪ್​ಗಳ ನಿಷೇಧದಿಂದ ಕೋಟ್ಯಂತರ ಭಾರತೀಯರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಈ ನಿರ್ಧಾರವು ಭಾರತೀಯ ಸೈಬರ್‌ಸ್ಪೇಸ್‌ನ ಸುರಕ್ಷತೆ, ಭದ್ರತೆಯನ್ನು ಖಚಿತಪಡಿಸಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಮತ್ತೆ ಚೀನಾದ 54 ಆ್ಯಪ್​ಗಳಿಗೆ ಭಾರತ ನಿಷೇಧ; ಈವರೆಗೆ 224 ಅಪ್ಲಿಕೇಶನ್‌ ಬ್ಯಾನ್

ABOUT THE AUTHOR

...view details