ಕೋಲ್ಕತ್ತಾ (ಪಶ್ಚಿಮ ಬಂಗಾಳ):ರಾಮನವಮಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿರುವ ಹಿನ್ನೆಲೆಯಲ್ಲಿ ಹನುಮ ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ನಡೆಸುವಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಗುರುವಾರ ಕೇಂದ್ರದ ಮೂರು ಅರೆಸೇನಾ ಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ಮೂರು ಪಡೆಗಳಲ್ಲಿ ಒಂದನ್ನು ಕೋಲ್ಕತ್ತಾದಲ್ಲಿ ಮತ್ತು ಉಳಿದವುಗಳನ್ನು ಉತ್ತರ 24 ಪರಗಣದ ಬ್ಯಾರಕ್‌ಪೋರ್ ಮತ್ತು ಹೂಗ್ಲಿಯಲ್ಲಿ ನಿಯೋಜಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ:ಕೇಂದ್ರದ ಪಡೆಗಳನ್ನು ಹೊರತುಪಡಿಸಿ ಪಶ್ಚಿಮ ಬಂಗಾಳದಾದ್ಯಂತ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲ್ಕತ್ತಾಕ್ಕಾಗಿ ಕೇಂದ್ರೀಯ ಪಡೆಗಳನ್ನು ಹಲವೆಡೆ ವಿಂಗಡಿಸಲಾಗಿದ್ದು, ಹೇಸ್ಟಿಂಗ್ಸ್, ಚಾರು ಮಾರ್ಕೆಟ್, ಗಾರ್ಡನ್ ರೀಚ್, ಗಿರೀಶ್ ಪಾರ್ಕ್, ಖಿದರ್‌ಪೋರ್, ಜೋರಾಬಗನ್ ಮತ್ತು ಎಂಟಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಅರೆಸೈನಿಕ ಪಡೆಗಳನ್ನು ಉತ್ತರ 24 ಪರಗಣದ ಬ್ಯಾರಕ್‌ಪೋರ್‌ನಲ್ಲಿ ನಿಯೋಜಿಸಲಾಗಿದ್ದು, ಇದು ಸೂಕ್ಷ್ಮ ಪ್ರದೇಶವೆಂದು ಹೆಸರಾಗಿದೆ ಹಾಗೂ ಹಿಂಸಾಚಾರ ಪೀಡಿತ ಹೂಗ್ಲಿಯ ರಿಶ್ರಾ ಮತ್ತು ಮೊಗ್ರಾ ಪ್ರದೇಶಗಳಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ಹಿಂದೆ ನಡೆದ ಹಿಂಸಾಚಾರಗಳು:ರಾಮ ನವಮಿ ಆಚರಣೆಯ ಮುನ್ನಾದಿನದಿಂದಲೂ ಹೂಗ್ಲಿ, ಹೌರಾ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿ ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರಗಳು ವರದಿಯಾಗಿದ್ದನ್ನು ಈ ವೇಳೆ ನೆನಪು ಮಾಡಿಕೊಳ್ಳಬಹುದು. ಮಾರ್ಚ್ 30ರಂದು ಹೌರಾದ ಶಿಬ್‌ಪುರದಲ್ಲಿ ಮತ್ತು ಏಪ್ರಿಲ್ 4ರಂದು ಹೂಗ್ಲಿಯ ರಿಶ್ರಾದಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಆ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು 144 ಸೆಕ್ಷನ್ ವಿಧಿಸಲಾಗಿತ್ತು. ಹಿಂಸಾಚಾರದ ಸಂದರ್ಭದಲ್ಲಿ ಉತ್ತರ ದಿನಾಜ್‌ಪುರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಇತರೆ ಜಿಲ್ಲೆಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ನಂತರ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ತಮ್ಮ ಡಾರ್ಜಿಲಿಂಗ್ ಪ್ರವಾಸವನ್ನು ಮೊಟಕುಗೊಳಿಸಿದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ರಿಶ್ರಾ ಪ್ರದೇಶಕ್ಕೆ ಭೇಟಿ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು.