ನವದೆಹಲಿ:ಫೆ. 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದಿಂದ ಸಾಂಪ್ರದಾಯಿಕ ಹಲ್ವಾ ಸಮಾರಂಭ ನಡೆಯುವುದು ವಾಡಿಕೆ. ಕಳೆದೆರಡು ವರ್ಷಗಳಿಂದ ಕೋವಿಡ್ನಿಂದಾಗಿ ತಡೆಹಿಡಿಯಲಾಗಿದ್ದ ಈ ಕಾರ್ಯಕ್ರಮ ನಾಳೆ ನಡೆಯಲಿದೆ. ಹಲ್ವಾ ಸಮಾರಂಭದ ಬಳಿಕ ಬಜೆಟ್ ಕೆಲಸ ನಡೆಯುತ್ತದೆ. ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ನ ನೆಲಮಾಳಿಗೆಯಲ್ಲಿ ಅಧಿಕಾರಿಗಳು ಅವಿರತ ಕೆಲಸ ಮಾಡಲಿದ್ದಾರೆ. (ಬಜೆಟ್ ಮುದ್ರಣಗೊಳ್ಳುವವರೆಗೆ ಉದ್ಯೋಗಿಗಳು ಇಲ್ಲಿಯೇ ಇರುತ್ತಾರೆ).
ನಾಳೆ ನಡೆಯಲಿರುವ ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಮತ್ತು ಸಚಿವಾಲಯದ ಇತರೆ ಅಧಿಕಾರಿಗಳು ಹಾಜರಿರಲಿದ್ದಾರೆ. ಬಜೆಟ್ ದಾಖಲೆ ಸಿದ್ದಪಡಿಸಿದ ನಂತರ ಹಣಕಾಸು ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷ ಹಣಕಾಸು ಸಚಿವಾಲಯ ಬಜೆಟ್ ಮಂಡನೆಗೆ ಮುನ್ನ ಈ ಸಂಪ್ರದಾಯಿಕ ಸಮಾರಂಭ ನಡೆಸುತ್ತದೆ. ಈ ಕಾರ್ಯಕ್ರಮದಲ್ಲಿ ಬಜೆಟ್ ಸಿದ್ದತೆಯಲ್ಲಿ ತೊಡಗುವ ನೂರಾರು ಅಧಿಕಾರಿಗಳು ಭಾಗಿಯಾಗುತ್ತಾರೆ.
ಬೃಹತ್ ಕಡಾಯಿ (ಬಾಣಲೆ)ಯಲ್ಲಿ ತಯಾರಾಗುವ ಹಲ್ವಾ ಕಾರ್ಯಕ್ರಮಕ್ಕೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡುವರು. ಬಳಿಕ ಬಿಸಿ ಬಿಸಿ ಹಲ್ವಾವನ್ನು ಸಿಬ್ಬಂದಿಗೆ ವಿತರಿಸಲಾಗುತ್ತದೆ. ಈ ಸಿಹಿ ತಿನ್ನುವ ಕಾರ್ಯಕ್ರಮದ ಬಳಿಕ ಬಜೆಟ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಧಿಕಾರಿ ವರ್ಗ ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ನಲ್ಲಿರುವ ನೆಲಮಳಿಗೆಯಲ್ಲೇ ತಂಗುತ್ತಾರೆ.