ನವದೆಹಲಿ: ಕಳೆದ ಒಂಬತ್ತು ವರ್ಷಗಳ ಎನ್‌ಡಿಎ ಆಡಳಿತದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳ ಸಂಖ್ಯೆಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷಗಳಿಗೆ ಕಿರುಕುಳ ನೀಡಲು ಈ ಸಂಸ್ಥೆ ಬಳಸಿಕೊಳ್ಳುತ್ತಿರುವುದರಿಂದ ದಾಳಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.
ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಏಜೆನ್ಸಿಗಳು ನಡೆಸಿದ ದಾಳಿಗಳ ಸಂಖ್ಯೆಯಲ್ಲಿ 27 ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳು ಹೇಳುತ್ತಿವೆ. ಯುಪಿಎ ಆಳ್ವಿಕೆಯಲ್ಲಿ ಅಂದರೆ 2004 ರಿಂದ 2014 ರ ಅವಧಿಯಲ್ಲಿ ಕೇವಲ 112 ದಾಳಿಗಳು ನಡೆದಿವೆ. ಆದರೆ, ಎನ್‌ಡಿಎ ಆಡಳಿತದ ಒಂಬತ್ತು ವರ್ಷಗಳಲ್ಲಿ ಈ ಸಂಖ್ಯೆ ಬರೋಬ್ಬರಿ 3010 ಎಂಬುದನ್ನು ಅಂಕಿ - ಸಂಖ್ಯೆಗಳು ದೃಢ ಪಡಿಸಿವೆ.
9 ವರ್ಷಗಳಲ್ಲಿ 99,356 ರೂ ಮೌಲ್ಯದ ಅಕ್ರಮ ಸಂಪತ್ತು ಜಪ್ತಿ:ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಅವಧಿಯಲ್ಲಿ ದೊಡ್ಡ ಪ್ರಮಾಣದ ಆಸ್ತಿ ಜಪ್ತಿ ಮಾಡಲಾಗಿದೆ. 2014 ಮತ್ತು 2022 ರ ನಡುವೆ, ಇಡಿ 99,356 ಕೋಟಿ ರೂಪಾಯಿ ಮೊತ್ತದ ಅಕ್ರಮ ಆದಾಯವನ್ನು ಜಪ್ತಿ ಮಾಡಿದೆ. 888 ಪ್ರಕರಣಗಳಲ್ಲಿ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಲಾಗಿದೆ, ಅವುಗಳಲ್ಲಿ 23 ವ್ಯಕ್ತಿಗಳನ್ನು ನ್ಯಾಯಾಲಯದಲ್ಲಿ ದೋಷಿ ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕೇವಲ 112 ದಾಳಿಗಳನ್ನು ನಡೆಸಿದ್ದು, 5,346.16 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿ ನಿರ್ದೇಶನಾಲಯ ಕೇವಲ 104 ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿತ್ತು ಮತ್ತು ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಸಚಿವರು ಸಂಸತ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣಗಳಲ್ಲಿ ಗಣನೀಯ ಏರಿಕೆ:ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 10 ವರ್ಷಗಳ ಯುಪಿಎ ಆಡಳಿತದಲ್ಲಿ ಕೇವಲ 571 ಪ್ರಕರಣಗಳು ಇದ್ದವು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ಇವುಗಳ ಸಂಖ್ಯೆ 996 ಕ್ಕೆ ಏರಿದೆ. ಯುಪಿಎ ಆಡಳಿತದಲ್ಲಿ 14 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದರೆ, ಕಳೆದ ಒಂಬತ್ತು ವರ್ಷಗಳಲ್ಲಿ ಇದು 7066 ಕೋಟಿಗೆ ಏರಿಕೆಯಾಗಿದೆ.