ಮುಂಬೈ (ಮಹಾರಾಷ್ಟ್ರ): ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ದಂತಹ ಕೇಂದ್ರದ ತನಿಖಾ ಸಂಸ್ಥೆಗಳು ಭಾರತೀಯ ಜನತಾ ಪಕ್ಷದ ಶಾಖೆಗಳಾಗಿ ಮಾರ್ಪಟ್ಟಿದ್ದು, ಇವುಗಳನ್ನು ರಾಜಕೀಯ ವಿರೋಧಿಗಳನ್ನು ಹಿಂಸಿಸಲು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
'ಸಿಬಿಐ ಸರ್ಕಾರಿ ಪಂಜರದ ಗಿಣಿ 'ಎಂದು ಸ್ವತಃ ಸುಪ್ರೀಂಕೋರ್ಟ್ ಘೋಷಿಸಿದೆ. ಅಲ್ಲದೇ ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಕಾರ್ಯವೈಖರಿಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದೆ. ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಪಕ್ಷವು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಇಡಿ ಹೆಚ್ಚು ಸಕ್ರಿಯವಾಗಿದೆ ಎಂದು ಮಹಾರಾಷ್ಟ್ರದ ಆಡಳಿತಾರೂಢ ಪಕ್ಷವಾದ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ: ಆಡಳಿತ ಪಕ್ಷಗಳ ಪರ ಕೆಲ ಪೊಲೀಸರು ಕೆಲಸ ಮಾಡುತ್ತಿರುವುದು ಮುಜುಗರ ಉಂಟು ಮಾಡುತ್ತಿದೆ: ಸುಪ್ರೀಂಕೋರ್ಟ್ ಬೇಸರ
ಸಿಬಿಐನ ಪ್ರಾಮುಖ್ಯತೆಯು ನಾಶವಾಗಲು ಆರಂಭಿಸಿದೆ. ರಾಜಕೀಯ ನಾಯಕರ ಆದೇಶದ ಮೇರೆಗೆ ಅನೇಕ ದಾಖಲೆಗಳನ್ನು ಸೃಷ್ಟಿಸಿ, ಕಾರ್ಯನಿರ್ವಹಿಸಲಾಗುತ್ತದೆ. ಹೀಗಾಗಿಯೇ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಧೀಶರು, ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳು ಬಿಜೆಪಿಗೆ ಸೇರುತ್ತಿದ್ದಾರೆ. ಈ ಹಿಂದೆ ಇವರು ಬಿಜೆಪಿ ಪರವಾಗಿ ಮಾಡಿದ ಸೇವೆಗಾಗಿ ಅವರಿಗೆ ಪ್ರತಿಫಲವನ್ನು ಬಿಜೆಪಿ ನೀಡುತ್ತಿದೆ ಎಂದು ಸಾಮ್ನಾದಲ್ಲಿ ಆರೋಪಿಸಲಾಗಿದೆ.
ನಿನ್ನೆಯಷ್ಟೇ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಈ ಕೇಸ್ಗಳ ಸಂಬಂಧ ತನಿಖೆ ವಿಳಂಬವಾಗಲು ಕಾರಣವೇನೆಂಬುದನ್ನು ಪೊಲೀಸರು, ಇಡಿ ಮತ್ತು ಸಿಬಿಐ ಸರಿಯಾಗಿ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು. ಆಡಳಿತ ಪಕ್ಷಗಳ ಪರ ಕೆಲ ಪೊಲೀಸರು ಕೆಲಸ ಮಾಡುತ್ತಿರುವುದು ಮುಜುಗರ ಉಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತ್ತು.