ನವದೆಹಲಿ:ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮದೇ ಅಧಿಪತ್ಯ ಸಾಧಿಸಿದ ಇನ್ಫ್ಲುಯೆನ್ಸರ್ಗಳು ಮತ್ತು ಸೆಲೆಬ್ರಿಟಿಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆನ್ಲೈನ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಪ್ರಚಾರ ಮಾಡಲು ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಇನ್ಫ್ಲುಯೆನ್ಸರ್ಗಳಿಗೆ ಮಾರ್ಗಸೂಚಿಗಳು ಅಗತ್ಯ ಎಂದು ಹೇಳಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯ, ಇಂದು ಜಾಹೀರಾತು ಕೇವಲ ಮುದ್ರಣ, ದೂರದರ್ಶನ ಅಥವಾ ರೇಡಿಯೊಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ಗೂ ಬಹುವಾಗಿ ತಲುಪಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವ ಬೀರುವ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಮಾಡಿದ ಜಾಹೀರಾತು ಸಾಮಾಜಿಕ ಮಾಧ್ಯಮ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರೂ ನಿಯಮಗಳಿಗೆ ಒಳಪಡಬೇಕು ಎಂದು ಸೂಚಿಸಿದೆ.
ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ಗಳು ತಾವು ಪೋಸ್ಟ್ ಮಾಡಿದ ವಿಡಿಯೋ, ಆಡಿಯೋ ಅಥವಾ ಫೋಟೋದಲ್ಲಿ ಯಾವುದಾದರೂ ಉತ್ಪನ್ನವನ್ನು ಪ್ರಚಾರ ಮಾಡುತ್ತಿದ್ದರೆ ಅದನ್ನು ಸ್ಪಷ್ಟವಾಗಿ ಬಹಿರಂಗ ಮಾಡುವುದು ಕಡ್ಡಾಯ. ನಿಯಮ ಉಲ್ಲಂಘಿಸುವ ಇನ್ಫ್ಲುಯೆನ್ಸರ್ಗಳಿಗೆ ಮತ್ತು ತಯಾರಕ ಕಂಪನಿಗಳಿಗೆ ಗ್ರಾಹಕ ರಕ್ಷಣಾ ಕಾಯ್ದೆಯಡಿ 1 ರಿಂದ 3 ವರ್ಷ ನಿಷೇಧ ಹೇರುವ ಮತ್ತು 10 ರಿಂದ 50 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶವಿದೆ.
ಹೊಸ ನಿಯಮಗಳಲ್ಲೇನಿದೆ?:ಇನ್ಫ್ಲುಯೆನ್ಸರ್ಗಳು ಪ್ರಚಾರ ಮಾಡುವ ಜಾಹೀರಾತು ಬಳಕೆದಾರರಿಗೆ ಸ್ಪಷ್ಟವಾದ ಪದಗಳಲ್ಲಿ ತಿಳಿಸಬೇಕು. ಉತ್ಪನ್ನ, ಸೇವೆ, ಬ್ರ್ಯಾಂಡ್ ಅಥವಾ ಅನುಭವದ ಬಗ್ಗೆ ತಮಗಿರುವ ಮಾಹಿತಿ, ಆಸಕ್ತಿಯನ್ನು ಸಂಪೂರ್ಣವಾಗಿ ತಿಳಿಸಬೇಕು. ಜಾಹೀರಾತು ಪ್ರಚಾರ ಮಾಡುವುದಿದ್ದರೆ, ಕಂಪನಿ ಮತ್ತು ಇನ್ಫ್ಲುಯೆನ್ಸರ್ ಮಧ್ಯೆ ಇರುವ ಸಂಬಂಧವನ್ನು ಬಹಿರಂಗಪಡಿಸಬೇಕು.