ಕರ್ನಾಟಕ

karnataka

ETV Bharat / bharat

ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿಗೆ ಹೆಚ್ಚಾಗುತ್ತಿರುವ ಬೇಡಿಕೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಗೋಧಿ ಪೂರೈಕೆಯಲ್ಲಿ ವ್ಯತ್ಯಯ. ಭಾರತದಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆ ತಡೆಗಟ್ಟಲು ಗೋಧಿ ಹಿಟ್ಟಿನ ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ.

ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ
Center bans export of wheat flour

By

Published : Aug 25, 2022, 6:13 PM IST

ನವದೆಹಲಿ:ದೇಶದಲ್ಲಿ ಸರಕುಗಳ ಬೆಲೆ ಏರಿಕೆಯನ್ನು ತಡೆಯಲು ಗೋಧಿ ಹಿಟ್ಟಿನ ರಫ್ತು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಗುರುವಾರ ಗೋಧಿ ರಫ್ತು ನೀತಿಯಲ್ಲಿ ಬದಲಾವಣೆಗಳನ್ನು ಅನುಮೋದಿಸಿತು ಮತ್ತು ಗೋಧಿ ಹಿಟ್ಟಿನ ಮೇಲಿನ ರಫ್ತು ನಿರ್ಬಂಧ ವಿನಾಯಿತಿಯನ್ನು ರದ್ದುಗೊಳಿಸಿತು. ವಿದೇಶಿ ವ್ಯಾಪಾರದ ಮಹಾನಿರ್ದೇಶಕರು (ಡಿಜಿಎಫ್‌ಟಿ) ಶೀಘ್ರದಲ್ಲೇ ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಿದ್ದಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ಅನುಮೋದನೆಯು ಈಗ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ವಿಧಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಗೋಧಿ ಹಿಟ್ಟಿನ ಬೆಲೆ ಏರಿಕೆ ತಡೆಗಟ್ಟಬಹುದು ಮತ್ತು ಆ ಮೂಲಕ ಸಮಾಜದ ಅತ್ಯಂತ ದುರ್ಬಲ ವರ್ಗಗಳ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಷ್ಯಾ ಉಕ್ರೇನ್ ಯುದ್ಧದ ಪರಿಣಾಮಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆಯಲ್ಲಿ ಹೆಚ್ಚಳವಾಗಿದ್ದರಿಂದ ಭಾರತವು ಗೋಧಿ ರಫ್ತು ನಿಷೇಧಿಸಿತ್ತು. ಅದಾಗಿ ತಿಂಗಳ ನಂತರ ರಫ್ತು ನೀತಿಗೆ ತಿದ್ದುಪಡಿಯಾಗಿದೆ. 1.4 ಬಿಲಿಯನ್ ಭಾರತೀಯ ಜನಸಂಖ್ಯೆಯ ಆಹಾರ ಭದ್ರತೆಯನ್ನು ರಕ್ಷಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸಚಿವಾಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಹಿಂದೆ ಗೋಧಿ ಹಿಟ್ಟಿನ ರಫ್ತಿನ ಮೇಲೆ ಯಾವುದೇ ನಿರ್ಬಂಧಗಳನ್ನು ಅಥವಾ ನಿಷೇಧ ಹೇರಬಾರದು ಎಂಬ ನೀತಿಯನ್ನು ಅನುಸರಿಸಲಾಗಿತ್ತು. ಆದರೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸಲು ಗೋಧಿ ಹಿಟ್ಟಿನ ರಫ್ತಿನ ಮೇಲಿನ ನಿಷೇಧ ಅಥವಾ ನಿರ್ಬಂಧ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಮೂಲಕ ನೀತಿಯ ಭಾಗಶಃ ಮಾರ್ಪಾಡು ಅಗತ್ಯವಿದೆ ಎಂದು ತಿಳಿಸಲಾಗಿದೆ.

ರಷ್ಯಾ ಮತ್ತು ಉಕ್ರೇನ್ ಅತಿ ದೊಡ್ಡ ಗೋಧಿ ರಫ್ತುದಾರರಾಗಿದ್ದು, ಜಾಗತಿಕ ಗೋಧಿ ವ್ಯಾಪಾರದ ಸರಿಸುಮಾರು ಕಾಲು ಭಾಗದಷ್ಟು ಪಾಲನ್ನು ಈ ದೇಶಗಳು ಹೊಂದಿವೆ. ಈಗ ಈ ಎರಡು ರಾಷ್ಟ್ರಗಳ ಮಧ್ಯದ ಸಂಘರ್ಷದಿಂದ ಜಾಗತಿಕ ಗೋಧಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಹೀಗಾಗಿ ಭಾರತೀಯ ಗೋಧಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಭಾರತದ ಗೋಧಿ ರಫ್ತಿನ ಮೇಲಿನ ನಿಷೇಧದಿಂದಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಗೋಧಿ ಹಿಟ್ಟಿನ ಬೇಡಿಕೆ ಹೆಚ್ಚಾಗಿದೆ. 2021ರ ಇದೇ ಅವಧಿಗೆ ಹೋಲಿಸಿದರೆ 2022 ರ ಏಪ್ರಿಲ್ ಮತ್ತು ಜುಲೈ ನಡುವೆ ಭಾರತದಿಂದ ಗೋಧಿ ಹಿಟ್ಟಿನ ರಫ್ತು ಶೇ 200ರಷ್ಟು ಹೆಚ್ಚಾಗಿದೆ.

ABOUT THE AUTHOR

...view details