ಅಮೃತಸರ: ದೇಶ ವಿಭಜನೆಯ 75 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಸಿಖ್ಖರಿಗೆ ಕೊನೆಗೂ ಪ್ರತ್ಯೇಕ ಗುರುತಿನ ಮಾನ್ಯತೆ ಸಿಕ್ಕಿದೆ. ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶದಂತೆ ಪಾಕಿಸ್ತಾನದ ಅಂಕಿ - ಅಂಶಗಳ ಬ್ಯೂರೋ ಉರ್ದುವಿನಲ್ಲಿ ಪ್ರಕಟವಾದ ಜನಗಣತಿಯ ನಮೂನೆಗಳಲ್ಲಿ ಸಿಖ್ ಎಂಬ ಕಾಲಂ ಅನ್ನು ಸೇರಿಸಿದೆ.
ಈ ನಿರ್ದಿಷ್ಟ ಕಾಲಂ ಇಲ್ಲದ ಕಾರಣದಿಂದ ಇಷ್ಟು ದಿನ ಸಿಖ್ಖರನ್ನು 'ಇತರ ಧರ್ಮಗಳ' ಕಾಲಂ ಅಡಿ ಎಣಿಕೆ ಮಾಡಲಾಗುತ್ತಿತ್ತು. ಇದರಿಂದ ಪಾಕಿಸ್ತಾನದಲ್ಲಿರುವ ಸಿಖ್ ಜನಸಂಖ್ಯೆಯ ನಿಖರವಾದ ಚಿತ್ರಣ ಈವರೆಗೂ ಸಿಕ್ಕಿಲ್ಲ. ಅಪೂರ್ಣ ಮಾಹಿತಿಯ ಕಾರಣದಿಂದ ಪಾಕಿಸ್ತಾನದಲ್ಲಿ ಸಿಖ್ಖರು ಮೂಲ ಹಕ್ಕುಗಳಿಂದ ವಂಚಿತರಾಗಿದ್ದಾರೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮಗೆ ಸಿಗಬೇಕಾದ ಪ್ರಾತಿನಿಧ್ಯ ಪಡೆಯಲು ವಿಫಲರಾಗುತ್ತಿದ್ದಾರೆ.