ಕರ್ನಾಟಕ

karnataka

ETV Bharat / bharat

2024ರ ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ಜನಗಣತಿ, ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆ: ಅಮಿತ್ ಶಾ - ಮಹಿಳಾ ಮೀಸಲಾತಿ ಮಸೂದೆ

2024ರ ಲೋಕಸಭೆ ಚುನಾವಣೆಯ ನಂತರ ಜನಗಣತಿ ಮತ್ತು ಡಿಲಿಮಿಟೇಶನ್ ಕೆಲಸ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಗೃಹಸಚಿವ ಅಮಿತ್ ಶಾ
ಗೃಹಸಚಿವ ಅಮಿತ್ ಶಾ

By PTI

Published : Sep 21, 2023, 10:12 AM IST

Updated : Sep 21, 2023, 10:20 AM IST

ನವದೆಹಲಿ:2024ರ ಲೋಕಸಭೆ ಚುನಾವಣೆಯ ನಂತರದಲ್ಲೇ ಜನಗಣತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆ ಕೆಲಸ ಆರಂಭವಾಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಗೆ ತಿಳಿಸಿದರು. ಮಹಿಳಾ ಮೀಸಲಾತಿ ಮಸೂದೆಗೆ ವಿಪಕ್ಷಗಳಿಂದ ಸರ್ವಾನುಮತದ ಬೆಂಬಲ ಕೋರಿದ ಅವರು, ನ್ಯೂನತೆಗಳಿದ್ದರೆ ನಂತರ ಸರಿಪಡಿಸಿಕೊಳ್ಳಬಹುದು ಎಂದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 3ನೇ ಒಂದು ಭಾಗದಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಯ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾ, ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡು ಮಾತನಾಡಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಡಿಲಿಮಿಟೇಶನ್ ಆಯೋಗವು ಈ ಕಾರ್ಯ ಕೈಗೆತ್ತಿಕೊಳ್ಳಲಿದೆ. ಲೋಕಸಭೆ ಚುನಾವಣೆಯ ನಂತರ ತಕ್ಷಣವೇ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದೆ. ಇದಾದ ಬಳಿಕ ಮಹಿಳಾ ಸಂಸದರು ಸದನದಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳೆಯರಿಗೆ ಸಿಗಬೇಕಾದ ಗೌರವ ಒದಗಿಸಿಕೊಡಲು ಪಕ್ಷಾತೀತ ರಾಜಕಾರಣ ಅವಶ್ಯಕ. ಈ ಹಿಂದೆ ಸಂಸತ್ತಿನಲ್ಲಿ ಮೀಸಲಾತಿಗಾಗಿ ನಾಲ್ಕು ಬಾರಿ ನಿರಾಸೆಯಾಗಿದೆ. ಈ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಲಿ ಎಂದರು.

1996 ರಿಂದ 2010 ರವರೆಗೆ ವಿವಿಧ ಸಂದರ್ಭಗಳಲ್ಲಿ ಮೀಸಲಾತಿ ಜಾರಿಗೊಳಿಸಲು ನಾಲ್ಕು ವಿಭಿನ್ನ ಮಸೂದೆಗಳನ್ನು ತರಲಾಗಿತ್ತು. ಆದರೆ ಅವು ಅಂಗೀಕಾರವಾಗಲಿಲ್ಲ. 2014ರಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಸಂಸತ್ತಿನಲ್ಲಿ, ತಮ್ಮ ಸರ್ಕಾರ ಬಡವರು, ದಲಿತರು, ಬುಡಕಟ್ಟುಗಳು, ಒಬಿಸಿ ಮತ್ತು ಮಹಿಳೆಯರಿಗೆ ಸೇರಿದ್ದಾಗಿದೆ ಎಂದು ಹೇಳಿದ್ದರು. ಇದೀಗ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಇತ್ತೀಚಿನ, ಜಿ20 ಶೃಂಗಸಭೆಯಲ್ಲಿ ಮೋದಿ ಮಹಿಳಾ ನೇತೃತ್ವದ ಅಭಿವೃದ್ಧಿಯ ದೂರದೃಷ್ಟಿ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಜನ್ ಧನ್ ಯೋಜನೆಯಡಿ ತೆರೆಯಲಾದ ಶೇ 70ರಷ್ಟು ಬ್ಯಾಂಕ್ ಖಾತೆಗಳು ಮಹಿಳೆಯರಿಗೆ ಸೇರಿವೆ. ಬಡವರ ಮನೆಗಳಲ್ಲಿ ಶೌಚಾಲಯದ ಕೊರತೆಯಿಂದ ಮಹಿಳೆಯರು ಹೆಚ್ಚು ಬಳಲುತ್ತಿದ್ದರು. ಮೋದಿ ಸರ್ಕಾರ ಬಂದ ಬಳಿಕ ಮಹಿಳೆಯರಿಗಾಗಿ 11.72 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 10 ಕೋಟಿ ಬಡ ಕುಟುಂಬಗಳಿಗೆ ಎಲ್‌ಪಿಜಿ ಸೌಲಭ್ಯ ನೀಡಿ ಮಹಿಳೆಯರ ಕೆಲಸವನ್ನು ಸುಲಭವನ್ನಾಗಿಸಿದೆ. ಹೆರಿಗೆ ರಜೆಯ ಅವಧಿಯನ್ನು ಕೂಡ 26 ವಾರಗಳಿಗೆ ಹೆಚ್ಚಿಸಿದೆ. ಮಹಿಳೆಯರ ಕಲ್ಯಾಣವು ಇತರರಿಗೆ ರಾಜಕೀಯ ಮತ್ತು ಚುನಾವಣಾ ವಿಷಯವಾಗಿರಬಹುದು, ಆದರೆ ಬಿಜೆಪಿಗೆ ಅವರ ಹಕ್ಕುಗಳಿಗೆ ನೀಡುವ ಮನ್ನಣೆಯ ವಿಷಯ ಎಂದರು. (ಪಿಟಿಐ)

ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಚರ್ಚೆ ವೇಳೆ ಅಮಿತ್​ ಶಾ v/s ರಾಹುಲ್​ ಗಾಂಧಿ ಒಬಿಸಿ ಮೀಸಲು ವಾಗ್ಯುದ್ಧ

Last Updated : Sep 21, 2023, 10:20 AM IST

ABOUT THE AUTHOR

...view details