ನವದೆಹಲಿ:ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ದುರಂತದ ತನಿಖಾ ವರದಿ ಇಂದು ಸಲ್ಲಿಕೆಯಾಗಿದ್ದು, ಅಪಘಾತಕ್ಕೆ ದಿಢೀರ್ ಹವಾಮಾನ ವೈಪರೀತ್ಯವೇ ಕಾರಣ ಎಂದು ವರದಿಯಿಂದ ಬಹಿರಂಗಗೊಂಡಿದೆ.
ಡಿಸೆಂಬರ್ 8ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಿಂಗ್ಟನ್ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ವೇಳೆ ಕೂನೂರು ಎಂಬಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಈ ವೇಳೆ ಹೆಲಿಕಾಪ್ಟರ್ನಲ್ಲಿದ್ದ ಬಿಪಿನ್ ರಾವತ್ ಹಾಗು ಅವರ ಪತ್ನಿ ಮಧುಲಿಕಾ ಸೇರಿದಂತೆ ಹಲವು ಸೇನಾ ಸಿಬ್ಬಂದಿ ವಿಧಿವಶರಾಗಿದ್ದರು. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ವಾರದ ನಂತರ ಬೆಂಗಳೂರಿನಲ್ಲಿ ನಿಧನರಾಗಿದ್ದರು.
ಸೇನಾ ಹೆಲಿಕಾಪ್ಟರ್ ಪತನದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ನೇತೃತ್ವದ ತನಿಖಾ ತಂಡ ರಚಿಸಿತ್ತು. ಈ ತಂಡ ಇದೀಗ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಡಿಸೆಂಬರ್ 9ರಂದು ಬ್ಲಾಕ್ ಬಾಕ್ಸ್ ವಶಕ್ಕೆ ಪಡೆದುಕೊಂಡು ಅನೇಕ ಆಯಾಮಗಳಿಂದ ತನಿಖೆ, ವಿಚಾರಣೆ ನಡೆಸಿದ್ದು ವಾಯುಪಡೆಯ ಹೆಡ್ ಕ್ವಾರ್ಟರ್ಸ್ಗೆ ವರದಿ ಸಲ್ಲಿಸಿದೆ.