ಹೈದರಾಬಾದ್ :ನಗರದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಕಳ್ಳರು ತಮ್ಮ ಮುಖ ಸಮೇತ ಮುಚ್ಚಿಕೊಂಡು ಕಳ್ಳತನ, ದರೋಡೆ ಎಸಗುತ್ತಾರೆ. ಆದ್ರೆ, ಇಲ್ಲೊಬ್ಬ ಕಳ್ಳ ಮೈಮೇಲಿರುವ ತನ್ನ ಬಟ್ಟೆಗಳನ್ನು ಬಿಚ್ಚಿ ಸಂಪೂರ್ಣ ಬೆತ್ತಲಾಗಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಮೆಡಿಕಲ್ ಶಾಪ್ ಕಳ್ಳತನದ ದೃಶ್ಯ.. ಸಿಸಿಟಿವಿಯಲ್ಲಿ ಏನಿದೆ?: ಈ ಘಟನೆ ಸನತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ಗೆ ಗುರುವಾರ ಮಧ್ಯರಾತ್ರಿ ಸರಿ ಸುಮಾರು 2 ಗಂಟೆ 10 ನಿಮಿಷಕ್ಕೆ ಕಳ್ಳನೊಬ್ಬ ಬಂದಿದ್ದಾನೆ. ಸುತ್ತಮುತ್ತ ನೋಡಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡಿದ್ದಾನೆ. ಬಳಿಕ ಮೆಡಿಕಲ್ ಶಾಪ್ ಶೆಟರ್ ಮುರಿದು ಅಂಗಡಿ ಪ್ರವೇಶಿಸಿದ್ದಾನೆ.
ಓದಿ:ಖತರ್ನಾಕ್ ಕಳ್ಳರ ಕೈಚಳಕ, 3.76 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ!
ಅಂಗಡಿಯೊಳಗೆ ಹೋದ ಕಳ್ಳ ಮೆಲ್ಲನೆ ತಾನೂ ತೊಟ್ಟ ಬಟ್ಟೆಗಳನ್ನು ಬಿಚ್ಚಿ ಬೆತ್ತಲೆಯಾಗಿದ್ದಾನೆ. ಅಂಗಡಿಯೊಳಗೆ ಸುಮಾರು 2 ಗಂಟೆಗಳ ಕಾಲ ಬೆತ್ತಲಾಗಿ ತಿರುಗಾಡಿದ್ದಾನೆ. ಸರಿ ಸುಮಾರು ಬೆಳಗಿನ ಜಾವ 4 ಗಂಟೆಗೆ ಟೇಬಲ್ ಡ್ರಾಯರ್ನಲ್ಲಿದ್ದ ಎರಡು ಲಕ್ಷ ಹಣವನ್ನು ದೋಚಿ ಹೊರ ಬಂದಿದ್ದಾನೆ. ಶಾಪ್ನಿಂದ ಹೊರ ಬಂದ ಕಳ್ಳ ತನ್ನ ಬಟ್ಟೆಗಳನ್ನು ಧರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಬೆಳಗ್ಗೆ ಮೆಡಿಕಲ್ ಶಾಪ್ ಮಾಲೀಕ ವಂಶಿಕೃಷ್ಣ ತಮ್ಮ ಅಂಗಡಿಗೆ ಬಂದಿದ್ದಾರೆ. ಆಗ ಕಳ್ಳತನವಾಗಿರುವುದು ಬೆಳಕಿಗೆ ಬಂದ ಕೂಡಲೇ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಸಿಸಿಟಿವಿ ನೋಡಿದ ಅವರಿಗೂ ಶಾಕ್ ಆಗಿದೆ. ಕೂಡಲೇ ಸಿಸಿಟಿವಿ ದೃಶ್ಯ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನು ಕಳ್ಳ ತನ್ನ ಬಟ್ಟೆಗಳನ್ನು ಕಳಚಿ ಕಳ್ಳತನಕ್ಕೆ ಮಂದಾಗಿದ್ದು ಏಕೆ ಎಂಬ ಪ್ರಶ್ನೆ ಮಾಲೀಕ ಮತ್ತು ಸ್ಥಳೀಯರಿಗೆ ಮೂಡಿದೆ. ಆರೋಪಿ ಸಿಕ್ಕ ಬಳಿಕವೇ ಈ ರೀತಿ ಕಳ್ಳತನ ಮಾಡಿದ್ದೇಕೆ ಎಂಬುದು ತಿಳಿಯಲಿದೆ.