ನವದೆಹಲಿ:ಕುಡಿದ ಮತ್ತಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯನ್ನು ಕೊಂದ ಘಟನೆ ತೀವ್ರ ಸ್ವರೂಪ ಪಡೆದಿದೆ. ಕಾರಿನಡಿ ಸಿಲುಕಿದ ದೇಹವನ್ನು 4 ಕಿಮೀ ಎಳೆದೊಯ್ಯಲಾದ ಭೀಕರತೆಯ ವಿರುದ್ಧ ಕುಟುಂಬಸ್ಥರು, ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ. ಘಟನೆಯ ಹೊಣೆ ಹೊತ್ತು ಲೆಫ್ಟಿನೆಂಟ್ ಗವರ್ನರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.
ದೆಹಲಿಯ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಭದ್ರತೆ ಒದಗಿಸಲು ದೆಹಲಿ ಪೊಲೀಸರು ಮತ್ತು ಲೆಫ್ಟಿನೆಂಟ್ ಗವರ್ನರ್ ವಿಫಲರಾಗಿದ್ದಾರೆ ಎಂದು ಎಎಪಿ ನಾಯಕ ಆದಿಲ್ ಖಾನ್ ಆರೋಪಿಸಿದ್ದಾರೆ. ದೆಹಲಿಯಲ್ಲಿ ನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸರು ಮಾತ್ರ ಸಾರ್ವಜನಿಕರಿಗೆ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ದೂರಿದರು.
ದೆಹಲಿಯಲ್ಲಿ ಅಕ್ರಮ ಮದ್ಯ ಮತ್ತು ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಲೆಫ್ಟಿನೆಂಟ್ ಗವರ್ನರ್ ಮತ್ತು ಪೊಲೀಸರು ವಿಫಲರಾಗಿದ್ದಾರೆ. ಯುವತಿಯ ಭೀಕರ ಸಾವಿನ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಘಟನೆಯ ಬಗ್ಗೆ ಕುಟುಂಬಕ್ಕೆ ನಿಖರವಾಗಿ ಮಾಹಿತಿ ನೀಡದೇ ಮುಚ್ಚಿಹಾಕಲಾಗುತ್ತಿದೆ. ಹೊಸ ವರ್ಷದ ವೇಳೆ ಪೊಲೀಸರು ವಿವಿಧೆಡೆ ನಿಯೋಜಿಸಲಾಗುವುದು ಎಂದು ಹೇಳಿದ್ದರೂ ಅದನ್ನು ಪಾಲಿಸದೇ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಬಳಕೆ:ಪ್ರತಿಭಟನೆ ತೀವ್ರ ಕಾವು ಪಡೆದು ಜನರು ಲೆಫ್ಟಿನೆಂಟ್ ಗವರ್ನರ್ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದಾರೆ. ಅಧಿಕಾರಿಗಳು ಕಾರುಗಳನ್ನು ತಡೆದು ದಾಂಧಲೆ ನಡೆಸಲಾಗಿದೆ. ನಗರದ ಕೆಲ ಮುಖ್ಯರಸ್ತೆಗಳನ್ನೂ ಮುಚ್ಚಲಾಗಿದೆ. ಪ್ರತಿಭಟನಾಕಾರರು ಚದುರಿದ ಬಳಿಕ ರಸ್ತೆಗಳನ್ನು ಮರು ಆರಂಭಿಸಲಾಗಿದೆ.
ಗವರ್ನರ್ ಜೊತೆ ಸಿಎಂ ಕೇಜ್ರಿವಾಲ್ ಚರ್ಚೆ:ಯುವತಿಯ ಭೀಕರ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಆರೋಪಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರನ್ನು ಬಿಡಬಾರದು ಎಂದು ಕೇಜ್ರಿವಾಲ್ ಹೇಳಿದ್ದಾರೆ.