ರಾಜಸ್ಥಾನ:ಜೋಧ್‌ಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಎದೆ ಝಲ್ ಎನಿಸುವಂತಿದೆ.
ಜೋಧ್‌ಪುರದಲ್ಲಿ ಭೀಕರ ಅಪಘಾತ: ಎದೆ ಝಲ್ ಎನಿಸುವಂತಿದೆ ಸಿಸಿಟಿವಿ ವಿಡಿಯೋ - ಜೋಧ್‌ಪುರ ಸುದ್ದಿ
ವೇಗವಾಗಿ ಬಂದ ಔಡಿ ಕಾರೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಗುದ್ದಿ ಬಳಿಕ ರಸ್ತೆಯ ಪಕ್ಕದ ಸ್ಲಂಗೆ ನುಗ್ಗಿರುವ ಭಯಾನಕ ಘಟನೆ ಜೋಧ್ಪುರ್ದಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಚೌಪಾಸ್ನಿ ಹೌಸಿಂಗ್ ಬೋರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಏಮ್ಸ್ ರಸ್ತೆಯಲ್ಲಿ ಔಡಿ ಕಾರೊಂದು ವೇಗವಾಗಿ ಬಂದು ನಿಯಂತ್ರಣಕ್ಕೆ ಬಾರದೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರ ಮೇಲೆ ಹತ್ತಿ ಬಳಿಕ ಸ್ಲಂಗೆ ನುಗ್ಗಿದೆ. ಈ ಭೀಕರ ಅಪಘಾತದಲ್ಲಿ 16 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಎಂ ಅಶೋಕ್ ಗೆಹ್ಲೋಟ್ ಜೋಧ್‌ಪುರ ಪ್ರವಾಸದಲ್ಲಿದ್ದು, ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಸಿಎಂ, ಈ ದುರಂತ ಅತ್ಯಂತ ದುಃಖಕರ ಎಂದಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದು, ಮೃತರ ಕುಟುಂಬ ಹಾಗೂ ಗಾಯಗೊಂಡವರಿಗೆ ನಿಯಮಾನುಸಾರ ಏನೇ ಪರಿಹಾರ ನೀಡಿದರೂ ಜಿಲ್ಲಾಡಳಿತ ನೀಡಲಿದೆ ಎಂದು ತಿಳಿಸಿದ್ದಾರೆ. ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.