ನವದೆಹಲಿ:ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(HAL)ನಿಂದ ಭಾರತೀಯ ವಾಯುಸೇನೆಗೆ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದೇ ವಾರದಲ್ಲಿ ಈ ಡೀಲ್ಗೆ ಕೇಂದ್ರ ಹಾಗೂ ಹೆಚ್ಎಎಲ್ ಸಹಿ ಹಾಕುವ ಸಾಧ್ಯತೆ ಇದೆ.
ಬರೋಬ್ಬರಿ 48,000 ಕೋಟಿ ರೂ. ವೆಚ್ಚದಲ್ಲಿ 83 ಲಘು ಯುದ್ಧ ವಿಮಾನ ಖರೀದಿ ಮಾಡಲು ಅನುಮೋದನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ರಕ್ಷಣಾ ಉತ್ಪಾದನೆಯಲ್ಲಿನ ಸ್ವಾವಲಂಬನೆಗಾಗಿ ಈ ಒಪ್ಪಂದ 'ಗೇಮ್ ಚೇಂಜರ್' ಆಗಲಿದೆ ಎಂದು ಬರೆದುಕೊಂಡಿದ್ದಾರೆ. ಐಎಎಫ್‌ನ ಸ್ವದೇಶಿ ಫೈಟರ್ ಜೆಟ್ 'ಎಲ್‌ಸಿಎ-ತೇಜಸ್' ನೌಕಾಪಡೆಯ ಬಲವರ್ಧನೆಗಾಗಿ ಸುಮಾರು 48,000 ಕೋಟಿ ರೂ. ಮೌಲ್ಯದ ಅತಿದೊಡ್ಡ ಸ್ಥಳೀಯ ರಕ್ಷಣಾ ಖರೀದಿ ಒಪ್ಪಂದ ಇದಾಗಿದೆ.
ವಿಶೇಷವೆಂದರೆ ಸುಮಾರು ಮೂರು ವರ್ಷಗಳ ಹಿಂದೆ ಐಎಎಫ್ 83 ತೇಜಸ್ ವಿಮಾನ ಖರೀದಿಸಲು ಆರಂಭಿಕ ಟೆಂಡರ್ ನೀಡಿತ್ತು. ಇದೀಗ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. 83 ಮಾರ್ಕ್ 1 ಎ ತೇಜಸ್ ಲಘು ಯುದ್ಧ ವಿಮಾನಗಳ ಒಪ್ಪಂದ ಇದಾಗಿದ್ದು, ಸುಧಾರಿತ ಸೇವಾ ಸಾಮರ್ಥ್ಯ, ವೇಗದ ಶಸ್ತ್ರಾಸ್ತ್ರ-ಲೋಡಿಂಗ್, ದೀರ್ಘಾಯುಷ್ಯ, ಉತ್ತಮ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಮತ್ತು ಆ್ಯಕ್ಟೀವ್ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್‌ನೊಂದಿಗೆ ಈ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿವೆ.