ನವದೆಹಲಿ: ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCPA) ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸಲು ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಿಸಿಪಿಎ ಸಮಿತಿಯು ದಿನಾಂಕವನ್ನು ಶಿಫಾರಸು ಮಾಡಿದೆ.
ಸಂಸತ್ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್? - ಲೋಕಸಭೆ
ಸಂಸತ್ ಚಳಿಗಾಲದ ಅಧಿವೇಶನ ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸಲು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCPA) ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![ಸಂಸತ್ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್? ccpa recommends winter session of parliament from nov 29 to dec 23](https://etvbharatimages.akamaized.net/etvbharat/prod-images/768-512-13579129-thumbnail-3x2-parliment.jpg)
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ನಿಯಮಾವಳಿಗಳ ನಡುವೆ ಅಧಿವೇಶನ ನಡೆಯುತ್ತಿದೆ. ಸೋಂಕು ಹೆಚ್ಚಳದಿಂದ ಕಳೆದ ವರ್ಷದ ಚಳಿಗಾಲದ ಅಧಿವೇಶನ ನಡೆದಿರಲಿಲ್ಲ. ಕಲಾಪದ ಸಂದರ್ಭದಲ್ಲಿ ರಾಜ್ಯಸಭಾ ಹಾಗೂ ಲೋಕಸಭೆ ಸದಸ್ಯರು ಕೋವಿಡ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಧಿವೇಶನಕ್ಕೂ ಮುನ್ನ ಎಲ್ಲಾ ಸದಸ್ಯರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ.
ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನ ಭಾರಿ ಮಹತ್ವ ಪಡೆದುಕೊಂಡಿದೆ. ಹಣದುಬ್ಬರ, ಇಂಧನ ಬೆಲೆ ಏರಿಕೆ, ಕಾಶ್ಮೀರದಲ್ಲಿ ಜನರ ಮೇಲೆ ಉಗ್ರರ ಗುಂಡಿನ ದಾಳಿ, ಲಖಿಂಪುರ್ ಖೇರಿ ಪ್ರಕರಣ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.