ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ಮಾದರಿಯಲ್ಲಿ (New Pattern) ಬೋರ್ಡ್ ಪರೀಕ್ಷೆಗಳನ್ನು ನಡೆಸಲಿದ್ದು, ಮೊದಲ ಅವಧಿಯ ಪರೀಕ್ಷೆಯಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯು ನವೆಂಬರ್ 16 ರಿಂದ ಪ್ರಾರಂಭವಾಗಲಿದ್ದು, 10ನೇ ತರಗತಿಯ ಪರೀಕ್ಷೆಯು ನವೆಂಬರ್ 17ರಂದು ಪ್ರಾರಂಭವಾಗುತ್ತದೆ. ಈ ಬಾರಿ ಸಿಬಿಎಸ್ಇ ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ. ಈಗ ಮೊದಲ ಅವಧಿಯ ಪರೀಕ್ಷೆಗಳು ನಡೆಯಲಿದ್ದು, ಮುಂದಿನ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಎರಡನೇ ಅವಧಿಯ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ.
ನವೆಂಬರ್ 16ರಿಂದ ಆರಂಭವಾಗಲಿರುವ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದುವ ಸಮಯವನ್ನು ಐದು ನಿಮಿಷಗಳ ಕಾಲ ವಿಸ್ತರಣೆ ಮಾಡಲಾಗಿದೆ. ಅಂದರೆ ಮೊದಲು 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಈಗ 20 ನಿಮಿಷ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಒಟ್ಟು 90 ನಿಮಿಷ ನೀಡಲಾಗುತ್ತದೆ ಎಂದು ಸಿಬಿಎಸ್ಇ (Central Board of Secondary Education) ಹೇಳಿದೆ.