ಧನ್‌ಬಾದ್(ಜಾರ್ಖಂಡ್): ಧನ್‌ಬಾದ್‌ನ ಖ್ಯಾತ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣದ ತನಿಖೆಗಾಗಿ ದೇಶದ ಉನ್ನತ ತನಿಖಾ ಸಂಸ್ಥೆ ಸಿಬಿಐ ಇಂಟರ್‌ಪೋಲ್‌ನ ಸಹಾಯ ಪಡೆಯಲಿದೆ. ಪ್ರಕರಣದ ಮೊಹರು ಮಾಡಿದ ಪ್ರಗತಿ ವರದಿ ಸಲ್ಲಿಸುವ ಸಂದರ್ಭದಲ್ಲಿ ಸಿಬಿಐ ಜಾರ್ಖಂಡ್ ಹೈಕೋರ್ಟ್‌ಗೆ ಈ ಕುರಿತು ಸ್ಪಷ್ಟಪಡಿಸಿದೆ.
ಇದಕ್ಕಾಗಿ ಭಾರತ ಸರ್ಕಾರದ ಗೃಹ ಸಚಿವಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅದು ಇನ್ನೂ ಬಾಕಿ ಉಳಿದಿದೆ. ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಾ. ರವಿರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು.
ವಿಚಾರಣೆಯ ವೇಳೆ, ಧನ್‌ಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಸಾವಿನ ತನಿಖೆ ಮುಂದುವರಿಸಲು ಇಂಟರ್‌ಪೋಲ್‌ನ ಸಹಾಯವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಈ ವಿಷಯದಲ್ಲಿ ಇಂಟರ್‌ಪೋಲ್‌ನೊಂದಿಗೆ ಸಮಾಲೋಚಿಸಿದ ನಂತರ ಸಂಶೋಧನೆ ಮುಂದುವರಿಸಲಾಗುವುದು. ಸಿಬಿಐ ಪರ ವಾದ ಆಲಿಸಿದ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ನಿಗದಿಪಡಿಸಿದೆ. ನ್ಯಾಯಾಲಯ, ಪ್ರಕರಣದ ಪ್ರಗತಿ ವರದಿಯನ್ನು 4 ವಾರಗಳಲ್ಲಿ ಮತ್ತೊಮ್ಮೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.