ಪ್ರಯಾಗ್ ರಾಜ್(ಉತ್ತರಪ್ರದೇಶ): ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಉತ್ತರ ಪ್ರದೇಶ ಸರ್ಕಾರ, ಮಹಾಂತ ನರೇಂದ್ರ ಗಿರಿಯವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಮಹಾಂತ್ ಸಾವಿನ ಬಳಿಕ ವಿಡಿಯೋ ಚಿತ್ರೀಕರಣ ಸಾವಿನ ಸುತ್ತ ಅನುಮಾನಗಳ ಹುತ್ತ
ಮಹಾಂತ ನರೇಂದ್ರಗಿರಿ ಸಾವಿನ ಕುರಿತಾದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವಿಡಿಯೋ ಅವರು ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಏನೇನಿದೆ?
ಈ ವಿಡಿಯೋದಲ್ಲಿ, ಮಹಾಂತ ನರೇಂದ್ರ ಗಿರಿ ಅವರ ಮೃತದೇಹವನ್ನು ನೆಲದ ಮೇಲೆ ಇರಿಸಲಾಗಿದೆ. ಅವರ ಶಿಷ್ಯರು ಅಳುತ್ತಿದ್ದಾರೆ. ಮಹಾಂತ್, ಹಾಕಿಕೊಂಡಿದ್ದ ನೇಣಿನ ಕುಣಿಕೆಯನ್ನು ಬಿಚ್ಚಲಾಗಿದ್ದು, ಕುಣಿಕೆಯ ಒಂದು ಭಾಗ ಫ್ಯಾನ್ಗೆ ಸಿಕ್ಕಿಹಾಕಿಕೊಂಡಿದೆ. ಅದೇ ಸಮಯದಲ್ಲಿ ಫ್ಯಾನ್ ತಿರುಗುತ್ತಿದೆ. ಈ ದೃಶ್ಯವನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಕೆಪಿ ಸಿಂಗ್, ಫ್ಯಾನ್ ಯಾಕೆ ತಿರುಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸ್ಥಳದಲ್ಲಿದ್ದ ಮಹಾಂತ್ ಶಿಷ್ಯರೊಬ್ಬರು, ಯಾರೋ ಫ್ಯಾನ್ ಸ್ವಿಚ್ ಆನ್ ಮಾಡಿದ್ದಾರೆ ಎಂದಿದ್ದಾರೆ. ಮಹಾಂತ್ ಸಾವಿನ ಬಗ್ಗೆ ಅಧಿಕಾರಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಸೂಸೈಡ್ ನೋಟ್ನಲ್ಲಿ ಏನಿದೆ?
ಸೆಪ್ಟೆಂಬರ್ 21 ರಂದು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬಹು ಪುಟಗಳ ಸೂಸೈಡ್ ನೋಟ್ ಕೂಡ ಪತ್ತೆಯಾಗಿತ್ತು.
ಅದರಲ್ಲಿ "ಶಿಷ್ಯ ಆನಂದ ಗಿರಿ ನನ್ನನ್ನು ಅವಮಾನಗೊಳಿಸಲು ಪ್ರಯತ್ನ ಪಟ್ಟಿದ್ದರು. ಹುಡುಗಿಯೊಂದಿಗೆ ನನ್ನ ಮಾರ್ಫ್ (ನಕಲಿ) ಫೋಟೋ ಇಟ್ಟುಕೊಂಡು ಅದನ್ನು ಸಾರ್ವಜನಿಕ ವಲಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಆನಂದ ಗಿರಿ ಕಂಪ್ಯೂಟರ್ನಲ್ಲಿ ಫೋಟೋಗಳು ಇದ್ದವು. ಅಲ್ಲದೇ, ಈ ಫೋಟೋ ಎಲ್ಲೆಡೆ ಹರಡಿದರೆ ಎಷ್ಟು ಜನರಿಗೆ ನಿಮ್ಮ ಮುಗ್ಧತೆಯನ್ನು ಸಾಬೀತುಪಡಿಸುತ್ತೀರಿ? ಎಂದು ನನ್ನನ್ನು ಕೇಳಿದ್ದರು. ನಾನು ಸಮಾಜದಲ್ಲಿ ಘನತೆಯಿಂದ ಬದುಕಿದ ವ್ಯಕ್ತಿ. ಈ ಅವಮಾನ ತಾಳಲಾರೆನು. ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ" ಎಂದು ಬರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರ ಗಿರಿ ಮೃತದೇಹ ಪತ್ತೆ.. ಸ್ಥಳದಲ್ಲಿ ಸೊಸೈಡ್ ನೋಟ್ ಲಭ್ಯ..