ನವದೆಹಲಿ: ಚೀನಾ ವೀಸಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಪುತ್ರ ಹಾಗೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಚೆನ್ನೈನ ಮನೆಯಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸಿರುವ ಸಿಬಿಐ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಇದೇ ವೇಳೆ ತಮ್ಮ ಮಗಳ ಲ್ಯಾಪ್ಟಾಪ್ನ್ನು ಸಿಬಿಐ ಅಧಿಕಾರಿಗಳು ಅಕ್ರಮವಾಗಿ ಜಪ್ತಿ ಮಾಡಿದ್ದಾರೆ ಎಂದು ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.
ಈ ಹಿಂದೆ ಮೇ 17ರಂದು ಚೆನ್ನೈನ ನುಂಗಂಬಾಕ್ಕಂನ ಪೈಕ್ರಾಫ್ಟ್ಸ್ ಗಾರ್ಡನ್ ರಸ್ತೆಯಲ್ಲಿರುವ ನಂ.16ರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಶೋಧಿಸಿದ್ದರು. ಆಗ ಅವರಿಗೆ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ. ಅಲ್ಲದೇ, ಮನೆಯಲ್ಲಿದ್ದ ಒಂದು ಕಪಾಟು ಬೀಗ ಹಾಕಿತ್ತು. ಶನಿವಾರ ಮತ್ತೆ ಶೋಧ ಕಾರ್ಯಕ್ಕೆ ಆಗಮಿಸಿದಾಗ ಆ ಕಬೋರ್ಡ್ ತೆರೆದಿದ್ದು, ಅಲ್ಲಿ ಬಟ್ಟೆ ಮಾತ್ರ ಇತ್ತು. ಸಿಬಿಐ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಮತ್ತು ಯಾವುದನ್ನು ವಶಪಡಿಸಿಕೊಂಡಿಲ್ಲ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
ಆದರೆ, ನನ್ನ ಮಗಳಿಗೆ ಸೇರಿದ ಲ್ಯಾಪ್‌ಟಾಪ್ ಹಾಗೂ ಐಪ್ಯಾಡ್ನ್ನು ಸಿಬಿಐ ಅಧಿಕಾರಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಆಕೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿದ್ದು, ಆ ಲ್ಯಾಪ್‌ಟಾಪ್ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾಳೆ. ಹೀಗಾಗಿ ಲ್ಯಾಪ್‌ಟಾಪ್ ವಶಕ್ಕೆ ಪಡೆದಿರುವುದು ಖಂಡನೀಯವಾಗಿದ್ದು, ಇದನ್ನು ಅಕ್ರಮವಾಗಿ ಜಪ್ತಿ ಮಾಡಿರುವುದರ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದ್ದಾರೆ.
ಇತ್ತ, ಮೇ 17ರಂದು ಕಬೋಡ್ವೊಂದನ್ನು ಬೀಗ ಹಾಕಲಾಗಿತ್ತು. ಅದರ ಕೀಲಿ ಕಾರ್ತಿ ಚಿದಂಬರಂ ಪತ್ನಿಯ ಬಳಿ ಇತ್ತು. ಆದರೆ, ಆಗ ಅವರು ಮನೆಯಲ್ಲಿ ಇರಲಿಲ್ಲ. ವಿದೇಶದಲ್ಲಿ ಇದ್ದರು. ಹೀಗಾಗಿ ಅದನ್ನು ಸೀಲ್ ಮಾಡಿದ್ದೆವು. ಶನಿವಾರ ಮತ್ತೆ ಮನೆ ಮೇಲೆ ದಾಳಿ ಮಾಡಿ, ಕಾರ್ತಿ ಚಿದಂಬರಂ ಅವರ ಪತ್ನಿಯನ್ನು ತನಿಖೆಗೆ ಒಳಪಡಿಸಲಾಯಿತು. ಅಲ್ಲದೇ, ಸೀಲ್ ಮಾಡಿದ್ದ ಕಬೋರ್ಡ್ ತೆರೆದಿದ್ದೇವೆ. ಕೆಲವು ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:'ನಾನು ಜಯಲಲಿತಾ ಸಹೋದರ.. ಆಸ್ತಿಯಲ್ಲಿ ನಂಗೂ 50% ಕೊಡಿ': ಮೈಸೂರಿನ ವ್ಯಕ್ತಿಯಿಂದ ಮನವಿ