ಗಾಜಿಯಾಬಾದ್ (ಉತ್ತರ ಪ್ರದೇಶ):ದೆಹಲಿ ಉಪಮುಖ್ಯಮಂತ್ರಿ, ಅಬಕಾರಿ ಸಚಿವರೂ ಆಗಿರುವ ಮನೀಶ್ ಸಿಸೋಡಿಯಾ ಅವರ ವಿರುದ್ಧ ಕೇಳಿ ಬಂದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಉತ್ತರಪ್ರದೇಶದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಸಿಸೋಡಿಯಾಗೆ ಸೇರಿದ ಲಾಕರ್ ಅನ್ನು ಪತ್ತೆ ಮಾಡಿ ಶೋಧ ನಡೆಸುತ್ತಿದೆ.
ಅಬಕಾರಿ ನೀತಿಯಲ್ಲಿ ಅಕ್ರಮ ನಡೆದ ಬಗ್ಗೆ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿ ತನಿಖೆ ಮಾಡುತ್ತಿದೆ. ಈ ವೇಳೆ, ಉತ್ತರ ಪ್ರದೇಶದ ಗಾಜಿಯಾಬಾದ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಸಿಸೋಡಿಯಾ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಲಾಕರ್ ಇರುವುದನ್ನು ಪತ್ತೆ ಮಾಡಲಾಗಿದೆ. ಸಿಬಿಐ ಅಧಿಕಾರಿಗಳು ಇಬ್ಬರನ್ನೂ ಕರೆದೊಯ್ದು ಲಾಕರ್ ತೆಗೆದು ಶೋಧ ನಡೆಸುತ್ತಿದ್ದಾರೆ.
ಕಳೆದ ವಾರ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರ ದೆಹಲಿ ನಿವಾಸ ಸೇರಿದಂತೆ 21 ಕಡೆ ದಾಳಿ ಮಾಡಿ ಶೋಧ ನಡೆಸಿದ್ದರು. ಅಲ್ಲದೇ, ಇನ್ನು 7 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.
ಸಿಬಿಐ ದಾಳಿ ವಿರುದ್ಧ ಹರಿಹಾಯ್ದ ಮನೀಶ್ ಸಿಸೋಡಿಯಾ ಅವರು, "ನಾವು ಪ್ರಾಮಾಣಿಕರು, ಲಕ್ಷಗಟ್ಟಲೆ ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತೇವೆ. ದುರದೃಷ್ಟವೆಂದರೆ ಈ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ದೇಶ ಇನ್ನೂ ನಂ.1 ಆಗಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಾನಿಸಿದ ವರದಿಯ ಆಧಾರದ ಮೇಲೆ ಸಿಸೋಡಿಯಾ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಯೋಜನೆಯಡಿ ಕರೆಯಲಾದ ಟೆಂಡರ್ನಲ್ಲಿ ಸಿಸೋಡಿಯಾ ಅವರು ಮದ್ಯದಂಗಡಿ ಪರವಾನಗಿದಾರರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಟ್ಟು, ಬೊಕ್ಕಸಕ್ಕೆ ಸಾಕಷ್ಟು ನಷ್ಟವನ್ನು ಉಂಟುಮಾಡಿದ್ದಾರೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿದೆ.
ಓದಿ:ಸೆಪ್ಟಂಬರ್ 2 ರಂದು ಮಂಗಳೂರಿಗೆ ಪ್ರಧಾನಿ ಮೋದಿ: ಕಡಲೂರಲ್ಲಿ ಎಸ್ಪಿಜಿ ತಂಡದಿಂದ ಪರಿಶೀಲನೆ