ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಶಾಲಾ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಶಾಸಕ ಹಾಗೂ ಇಬ್ಬರು ಕೌನ್ಸಿಲರ್ಗಳು ಸೇರಿದಂತೆ ತೃಣಮೂಲ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಗುರುವಾರ ಬೆಳಗ್ಗೆ ಏಕಕಾಲದಲ್ಲಿ ಕೇಂದ್ರ ತನಿಖಾ ದಳ ದಾಳಿ ನಡೆಸಿದೆ.
ಮುರ್ಷಿದಾಬಾದ್ ಜಿಲ್ಲೆಯ ಡೊಮ್ಕಲ್ನ ಶಾಸಕ ಜಫಿಕುಲ್ ಇಸ್ಲಾಂ ಮತ್ತು ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಇದೀಗ ಜೈಲು ಸೇರಿರುವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕ ಹಾಗೂ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಕೌನ್ಸಿಲರ್ ಬಪ್ಪಡಿತ್ತಾ ದಾಸ್ಗುಪ್ತಾ ಹಾಗೂ ತೃಣಮೂಲ ಕಾಂಗ್ರೆಸ್ ಶಾಸಕಿ ಅದಿತಿ ಮುನ್ಷಿ ಅವರ ಪತಿ ಹಾಗೂ ಬೀಧಾನ ನಗರ ಮುನ್ಸಿಪಲ್ ಕಾರ್ಪೋರೇಷನ್ ಕೌನ್ಸಿಲರ್ ದೇಬ್ರಾಜ್ ಚಕ್ರವರ್ತಿ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ. ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಸಂಬಂಧಿಸಿದಂತೆ ಕೋಲ್ಕತ್ತಾ, ಮುರ್ಷಿದಾಬಾದ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ದೇಬ್ರಾಜ್ ಚಕ್ರವರ್ತಿ ಅವರ ರಾಜ್ಹತ್ನಲ್ಲಿರುವ ಮನೆಯಲ್ಲಿ ಹಲವು ಗಂಟೆಗಳ ಕಾಲ ಶೋಧ ನಡೆಸಿದ ಸಿಬಿಐ ತನಿಖಾಧಿಕಾರಿಗಳು ಮಧ್ಯಾಹ್ನ ಚಕ್ರವರ್ತಿ ಅವರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಸಿಬಿಐ ಮೂಲಗಳ ಪ್ರಕಾರ ದೇವರಾಜ್ ವಿರುದ್ಧ ಚುನಾವಣೋತ್ತರ ಹಿಂಸಾಚಾರದಲ್ಲಿ ಭಾಗಿಯಾದ ಆರೋಪಗಳು ಹಾಗೂ ಪುರಸಭೆಯ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲೂ ಅವರ ಹೇಸರು ಕೇಳಿ ಬಂದಿದೆ.
ತನಿಖೆ ಸಂಬಂಧ ಮೊದಲ ಬಾರಿಗೆ ಕೂಚ್ ಬಿಹಾರ್ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಸಜಲ್ ಸರ್ಕಾರ್ ಅವರ ಮನೆ ಮೇಲೆ ದಾಳಿ ಮಾಡಿರುವ ಸಿಬಿಐ ಅಧಿಕಾರಿಗಳು ಕೋಲ್ಕತ್ತಾದ ಗಡಿ ದಾಟಿ ತನಿಖೆ ಕೈಗೊಂಡಿದ್ದಾರೆ. ಕೂಚ್ ಬಿಹಾರ್ನ ಪರೇಶ್ ಕರ್ ಚೌಪತಿ ಪ್ರದೇಶದಲ್ಲಿರುವ ಬಿಎಲ್ಡಿ ಕಾಲೇಜಿನ ಮಾಲೀಕರ ಮನೆಗೆ ತೆರಳಿದ್ದಾರೆ. ಆದರೆ, ಆ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ನೆರೆ ಹೊರೆಯವರೊಂದಿಗೆ ಮಾತನಾಡಿ ನಿರ್ಣಾಯಕ ಮಾಹಿತಿ ಸಂಗ್ರಹಿಸಿದ್ದಾರೆ.
ಬುರ್ವಾನ್ ಶಾಸಕ ಜಿಬಾನ್ ಕೃಷ್ಣ ಸಹಾ ಅವರನ್ನು ಸಿಬಿಐ ಬಂಧಿಸಿದ್ದು, ಇದೀಗ ಡೊಮ್ಕಲ್ನ ಶಾಸಕ ಜಫಿಕುಲ್ ಇಸ್ಲಾಂ ಅವರ ಮನೆ ಮೇಲೆ ದಾಳಿ ನಡೆಸಿದೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಲ್ಲೇ ಇದ್ದು ತನಿಖೆ ನಡೆಸಿದ್ದಾರೆ. ಇದಲ್ಲದೇ ಬುರ್ವಾನ್ ಪೊಲೀಸ್ ಠಾಣೆಯ ಕೂಲಿ ಚೌರಸ್ತಾ ಇಂಟರ್ ಸೆಕ್ಷನ್ನಲ್ಲಿರುವ ಬಿಇ ಕಾಲೇಜಿನ ಮಾಲೀಕ ಸಜಲ್ ಅನ್ಸಾರಿ ಅವರ ಮನೆ ಮೇಲೂ ಸಿಬಿಐ ದಾಳಿ ನಡೆಸಿದೆ. ಈ ದಾಳಿಗಳ ಮಧ್ಯೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸಿವೆ.
ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಸಿಬಿಐ, ಇಡಿ, ತೆರಿಗೆ ಇಲಾಖೆಗಳ ದುರುಪಯೋಗ: ಶಶಿ ತರೂರ್