ಪಾಟ್ನಾ (ಬಿಹಾರ): ದೆಹಲಿಯ ರೂಸ್ ಅವೆನ್ಯೂ ಕೋರ್ಟ್ನಿಂದ ನೋಟಿಸ್ ಜಾರಿಯಾದ ಬೆನ್ನಲ್ಲೇ ಸಿಬಿಐ ತಂಡ ರಾಬ್ರಿ ದೇವಿ ಯಾದವ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಈ ಬಾರಿ ಉದ್ಯೋಗದಲ್ಲಿ ಹಗರಣ ಸಂಬಂಧ 12 ಮಂದಿಯ ಸಿಬಿಐ ತಂಡ ದಾಳಿ ನಡೆಸಿದೆ. ಜಮೀನು ಹಗರಣ ಸಂಬಂಧವೂ ಸಿಬಿಐ ಬಹಳ ದಿನಗಳಿಂದ ರಾಬ್ರಿ ದೇವಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಈ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯವು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಆರೋಪಿಗಳಿಗೆ ಮಾರ್ಚ್ 15 ರಂದು ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಸಿಬಿಐ ಸೆಪ್ಟೆಂಬರ್ 23, 2021 ರಂದು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿತ್ತು ಮತ್ತು ನಂತರ ಮೇ 18, 2022 ರಂದು ಪ್ರಥಮ ಮಾಹಿತಿ ವರದಿಯನ್ನೂ ಸಲ್ಲಿಸಿದೆ.
ಏನಿದು ಪ್ರಕರಣ:2004-2009ರಲ್ಲಿ ಅವರು ರೈಲ್ವೆ ಸಚಿವರಾಗಿದ್ದಾಗ ವಿವಿಧ ವಲಯಗಳಲ್ಲಿ ಗ್ರೂಪ್ “ಡಿ” ಹುದ್ದೆ ನೇಮಕಕ್ಕೆ ಪ್ರತಿಯಾಗಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಭೂಮಿಯನ್ನು ಲಾಲು ಪ್ರಸಾದ್ ಅವರ ಸಂಬಂಧಿಕರಿಗೆ ಮಾರಾಟ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ತನಿಖಾ ಸಂಸ್ಥೆ ಆರೋಪಿಸಿದೆ. ಎಫ್ಐಆರ್ನಲ್ಲಿ ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಮಿಸಾ ಯಾದವ್ ಮತ್ತು ಹೇಮಾ ಯಾದವ್ ಮತ್ತು ಪ್ರತಿಯಾಗಿ ಉದ್ಯೋಗಕ್ಕಾಗಿ ತಮ್ಮ ಭೂಮಿಯನ್ನು ವರ್ಗಾಯಿಸಿದ ಇತರ 12 ಮಂದಿಯ ಹೆಸರೂ ಇದೆ.
ಪಾಟ್ನಾದಲ್ಲಿ ಸುಮಾರು 1,05,292 ಚದರ ಅಡಿ ಭೂಮಿಯನ್ನು ಲಾಲು ಪ್ರಸಾದ್ ಅವರ ಸಂಬಂಧಿಕರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ, ಅದರ ಮೌಲ್ಯವು ಪ್ರಸ್ತುತ ಸರ್ಕಲ್ ದರದ ಪ್ರಕಾರ ಸುಮಾರು 4.39 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಐದು ಸೇಲ್ ಡೀಡ್ಗಳು ಮತ್ತು ಎರಡು ಗಿಫ್ಟ್ ಡೀಡ್ಗಳ ಮೂಲಕ ಭೂಮಿಯನ್ನು ವರ್ಗಾಯಿಸಲಾಗಿದೆ ಮತ್ತು ಹೆಚ್ಚಿನ ಮಾರಾಟ ಪತ್ರಗಳಲ್ಲಿ ಮಾರಾಟಗಾರರಿಗೆ ಪಾವತಿಯನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ. ಪ್ರಚಲಿತದಲ್ಲಿರುವ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರಸಾದ್ ಅವರ ಕುಟುಂಬದ ಸದಸ್ಯರು ನೇರವಾಗಿ ಮಾರಾಟಗಾರರಿಂದ ಭೂಮಿ ಖರೀದಿಸಿದ್ದಾರೆ ಎನ್ನಲಾಗಿದೆ.
ದಾಳಿ ಬಗ್ಗೆ ತೇಜಸ್ವಿಯಾದವ್ ಕಿಡಿಕಿಡಿ:ಈ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರ ಉಪಮುಖ್ಯಮಂತ್ರಿ, ರಾಬ್ರಿ ದೇವಿ ಯಾದವ್ ಮಗ ತೇಜಸ್ವಿ ಯಾದವ್ ಸಿಬಿಐಗೆ ಉತ್ತಮ ಸಲಹೆ ನೀಡಿದ್ದಾರೆ. ಪದೇ ಪದೆ ಮನೆ ಮೇಲೆ ದಾಳಿ ಮಾಡುವುದರಿಂದ ಸರ್ಕಾರದ ಹಣ ಖರ್ಚಾಗುತ್ತದೆ. ಅದರ ಬದಲು ಸಿಬಿಐ ತಮ್ಮ ನಿವಾಸದಲ್ಲಿಯೇ ಕಚೇರಿ ತೆರೆಯಬಹುದು ಎಂದು ಸಿಬಿಐ ದಾಳಿಯನ್ನು ಟೀಕಿಸಿದ್ದಾರೆ.