ಕರ್ನಾಟಕ

karnataka

ETV Bharat / bharat

ಆರ್ಯನ್‌ ಖಾನ್ ಡ್ರಗ್‌ ಪ್ರಕರಣ: ಸಿಬಿಐ ಮುಂದೆ ಹಾಜರಾಗುವಾಗ ಸತ್ಯಮೇವ ಜಯತೆ ಎಂದ ಸಮೀರ್ ವಾಂಖೆಡೆ... 5 ಗಂಟೆ ವಿಚಾರಣೆ

ಆರ್ಯನ್‌ ಖಾನ್ ಡ್ರಗ್‌ ಪ್ರಕರಣದಲ್ಲಿ ಐಆರ್​ಎಸ್ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

CBI questions Sameer Wankhede 5 hours in cruise drug bust bribery case
ಸಿಬಿಐ ವಿಚಾರಣೆಗೆ ಸಮೀರ್ ವಾಂಖೆಡೆ ಹಾಜರು

By

Published : May 20, 2023, 6:53 PM IST

Updated : May 20, 2023, 7:17 PM IST

ಮುಂಬೈ (ಮಹಾರಾಷ್ಟ್ರ):ಡ್ರಗ್‌ ಸೇವನೆ ಪ್ರಕರಣದಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್​ ಮಗ ಆರ್ಯನ್‌ ಖಾನ್​ ಅವರನ್ನು ರಕ್ಷಿಸಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪಕ್ಕೆ ಸಂಬಂಧಿಸಿದ್ದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ದ ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.

ಭಾರತೀಯ ಕಂದಾಯ ಸೇವೆ (ಐಆರ್​ಎಸ್) ಅಧಿಕಾರಿಯಾಗಿರುವ ವಾಂಖೆಡೆ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​ (ಬಿಕೆಸಿ)ನಲ್ಲಿರುವ ಸಿಬಿಐ ಕಚೇರಿಗೆ ಬೆಳಗ್ಗೆ 10.15ರ ಸುಮಾರಿಗೆ ತಲುಪಿದರು. ಈ ವೇಳೆ ಸಿಬಿಐ ಕಚೇರಿಗೆ ಪ್ರವೇಶಿಸುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಸತ್ಯಮೇವ ಜಯತೆ" ಎಂದಷ್ಟೇ ಹೇಳಿದರು. ಆದರೆ, ಕಚೇರಿಯಿಂದ ಹೊರ ಬರುವ ವೇಳೆ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.

ಆರ್ಯನ್‌ ಖಾನ್ ಡ್ರಗ್‌ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿತ್ತು. ಆದರೆ, ಅಂದು ಅವರು ಹಾಜರಾಗಿರಲಿಲ್ಲ. ಇಂದು ಮೊದಲ ಬಾರಿಗೆ ತನಿಖಾಧಿಕಾರಿಗಳ ಮುಂದೆ ಹಾಜರಾದರು. ಮಧ್ಯಾಹ್ನ 2 ಗಂಟೆಗೆ ಸುಮಾರು 30 ನಿಮಿಷಗಳ ಕಾಲ ಊಟಕ್ಕೆಂದು ಬಿಡುವು ಕೊಡಲಾಗಿತ್ತು. ನಂತರ ಸಿಬಿಐ ಕಚೇರಿಗೆ ಹಿಂತಿರುಗಿ ತನಿಖೆಗೆ ಸೇರಿಕೊಂಡರು. ಇದಾದ ನಂತರ ಸಂಜೆ 4:30ರ ವಿಚಾರಣೆ ಮುಗಿದ ಕಚೇರಿಯಿಂದ ತೆರಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಆರ್ಯನ್‌ ಖಾನ್​ ಅವರನ್ನು ರಕ್ಷಣೆ ಮಾಡಲು ತಂದೆ ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಸಮೀರ್ ವಾಂಖೆಡೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಎನ್‌ಸಿಬಿಯ ದೂರಿನ ಮೇರೆಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಸುಲಿಗೆ ಬೆದರಿಕೆ ಆರೋಪದ ಮೇಲೆ ಸಿಬಿಐ ಮೇ 11ರಂದು ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಕೇಸ್​ ದಾಖಲಿಸಿದೆ.

ಇದಾದ ನಂತರ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಾಂಖೆಡೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ನಡುವೆ ಶುಕ್ರವಾರ ಬಾಂಬೆ ಹೈಕೋರ್ಟ್‌ನಿಂದ ಅವರಿಗೆ ತಾತ್ಕಾಲಿಕ ಪರಿಹಾರ ನೀಡಿತ್ತು. ಮೇ 22ರವರೆಗೆ ಅವರ ವಿರುದ್ಧ ಬಂಧನದಂತಹ ಯಾವುದೇ "ಬಲವಂತದ ಕ್ರಮ" ತೆಗೆದುಕೊಳ್ಳದಂತೆ ಸಿಬಿಐಗೆ ನಿರ್ದೇಶನ ನೀಡಿದೆ.

2021ರ ಅಕ್ಟೋಬರ್ 2ರಂದು ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದಿಂದ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದ ಎನ್‌ಸಿಬಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಡ್ರಗ್ಸ್ ವಿರೋಧಿ ಏಜೆನ್ಸಿ ಸ್ಥಾಪಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ಯು ವಾಂಖೆಡೆ ನೇತೃತ್ವದ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಿತ್ತು.

ಇದನ್ನೂ ಓದಿ:ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ​ದಲ್ಲಿ 25 ಕೋಟಿ ಲಂಚಕ್ಕೆ ಬೇಡಿಕೆ: ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಕೇಸ್​

Last Updated : May 20, 2023, 7:17 PM IST

ABOUT THE AUTHOR

...view details