ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆಗೆ ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಮತ್ತು ಅವರ ತಂದೆ ಭಾಸ್ಕರ್ ರೆಡ್ಡಿ ಸಂಚು ರೂಪಿಸಿದ್ದ ಬಗ್ಗೆ ಹಾಗೂ ಕೊಲೆಯ ನಂತರ ಸಾಕ್ಷ್ಯ ನಾಶ ಸೇರಿದಂತೆ ಹಲವು ವಿವರಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಅಲ್ಲದೇ, ಈ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಅವರನ್ನು 259ನೇ ಸಾಕ್ಷಿಯನ್ನಾಗಿ ಹೆಸರಿಸಲಾಗಿದೆ.
ಶರ್ಮಿಳಾ ಕಳೆದ ವರ್ಷ ಅಕ್ಟೋಬರ್ 7ರಂದು ದೆಹಲಿಯಲ್ಲಿ ಸಿಬಿಐಗೆ ಹೇಳಿಕೆ ನೀಡಿದ್ದರು. ಸಿಬಿಐಗೆ ನೀಡಿದ ಹೇಳಿಕೆಯಲ್ಲಿ ಶರ್ಮಿಳಾ ತನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ, ರಾಜಕೀಯ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಕೌಟುಂಬಿಕ ಅಥವಾ ಹಣಕಾಸಿನ ಕಾರಣದಿಂದ ಕೊಲೆ ನಡೆದಿಲ್ಲ. ಅದರ ಹಿಂದೆ ಬಲವಾದ ಕಾರಣವಿದೆ ಎಂದು ಶರ್ಮಿಳಾ ಸಿಬಿಐಗೆ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಕೊಲೆಯಾಗುವ ಕೆಲವು ತಿಂಗಳ ಹಿಂದೆ ವಿವೇಕಾನಂದ ರೆಡ್ಡಿ ಬೆಂಗಳೂರಿನ ತಮ್ಮ ಮನೆಗೆ ಬಂದು ಕಡಪ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದರು. ಅವಿನಾಶ್ ಸ್ಪರ್ಧಿಸಬಾರದು ಎಂದು ಅವರು ಹೇಳಿದ್ದರು ಎಂದು ಶರ್ಮಿಳಾ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೇ, ಒಟ್ಟಾಗಿ ಅವಿನಾಶ್‌ಗೆ ಎಂಪಿ ಟಿಕೆಟ್ ನೀಡದಂತೆ ಜಗನ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಶರ್ಮಿಳಾ ಸಾಕ್ಷಿ ನುಡಿದಿದ್ದಾರೆ.
ಇದನ್ನೂ ಓದಿ:ಮಾಜಿ ಸಚಿವ ವೈಎಸ್ ವಿವೇಕ್ ಹತ್ಯೆ ಕೇಸ್: ವೈಎಸ್ ಭಾಸ್ಕರ್ ರೆಡ್ಡಿ ಸೇರಿ ಇಬ್ಬರು ಸಿಬಿಐ ಕಸ್ಟಡಿಗೆ, ಸಂಸದ ಅವಿನಾಶ್‌ಗೆ ಗ್ರಿಲ್
ವಿವೇಕಾನಂದ ರೆಡ್ಡಿ ಅವರು ಜಗನ್ ವಿರುದ್ಧ ಹೋಗುವುದಿಲ್ಲ ಎಂದು ಭಾವಿಸಿದ್ದರು. ನಾನು ಖಂಡಿತವಾಗಿಯೂ ಜಗನ್ ಅವರನ್ನು ಒಪ್ಪಿಸುತ್ತೇನೆ ಎಂದು ಅವರು ವಿಶ್ವಾಸದಿಂದ ಮಾತನಾಡಿದ್ದರು. ಜಗನ್ ನನಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿದಿದ್ದರಿಂದ ಸಂಸದೆಯಾಗಿ ಸ್ಪರ್ಧಿಸಲು ಒಪ್ಪಲಿಲ್ಲ ಎಂದು ಶರ್ಮಿಳಾ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ವಿವೇಕಾನಂದ ರೆಡ್ಡಿ ಏಕೆ ಸ್ಪರ್ಧಿಸಲು ಬಯಸಲಿಲ್ಲ ಮತ್ತು ನಿಮ್ಮ ಮೇಲೆ ಏಕೆ ಒತ್ತಡ ಹೇರಿದರು ಎಂಬ ಪ್ರಶ್ನೆಗೆ ಶರ್ಮಿಳಾ, ವೈ.ಎಸ್.ವಿಜಯಮ್ಮ (ಜಗನ್ ತಾಯಿ) ವಿರುದ್ಧ ವಿವೇಕಾನಂದ ರೆಡ್ಡಿ ಸ್ಪರ್ಧಿಸಿದ ನಂತರ, ಅಂತರ ಉಂಟಾಗಿತ್ತು. ಹೀಗಾಗಿ ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ಅವರು ಭಾವಿಸಿದ್ದರು ಎಂದು ಹೇಳಿಕೆ ಕೊಟ್ಟಿದ್ದಾರೆ.
ಮುಂದುವರೆದು, ವಿವೇಕಾರೆಡ್ಡಿ ಎಂಎಲ್ಸಿ ಚುನಾವಣೆಯಲ್ಲಿ ಸೋಲಿಗೆ ಆಪ್ತ ಸ್ನೇಹಿತರೇ ಕಾರಣ. ತನಗೆ ಗೊತ್ತಿರುವಂತೆ ಅವಿನಾಶ್, ಭಾಸ್ಕರ್ ರೆಡ್ಡಿ ಮತ್ತು ಕೆಲವರು ಆಪ್ತರು ಸಂಬಂಧಿಕರು ಇದಕ್ಕೆ ಕಾರಣ. ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿದೆ ಅನ್ನಿಸಿದರೂ, ಒಳಗೊಳಗೆ ಶೀತಲ ಸಮರ ಇತ್ತು ಎಂದು ಶರ್ಮಿಳಾ ತಮ್ಮ ಹೇಳಿಕೆ ದಾಖಲಿಸಿದ್ದರು ಎಂದು ಸಿಬಿಐ ಮಾಹಿತಿ ನೀಡಿದೆ.
ಪ್ರಕರಣದ ಹಿನ್ನೆಲೆ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಲ್ಲಿ ವಿವೇಕಾನಂದ ರೆಡ್ಡಿ ಒಬ್ಬರಾಗಿದ್ದಾರೆ. 2019ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ಎಂದರೆ, ಮಾರ್ಚ್ 15ರಂದು ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿರುವ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದರು.
ಈ ಪ್ರಕರಣದಲ್ಲಿ ಮತ್ತೊಬ್ಬ ಸಹೋದರ ಭಾಸ್ಕರ್ ರೆಡ್ಡಿ ಬಂಧನಕ್ಕೆ ಒಳಗಾಗಿದ್ದಾರೆ. ಈ ಭಾಸ್ಕರ್ ರೆಡ್ಡಿ ಸಹ ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವಿದೆ. ಅವರ ಭಾಸ್ಕರ್ ರೆಡ್ಡಿ ಮಗ ಅವಿನಾಶ್ ರೆಡ್ಡಿ ಸಂಸದರಾಗಿದ್ದಾರೆ. ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರ ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ:Viveka murder case: ಅವಿನಾಶ್, ಭಾಸ್ಕರ್ ರೆಡ್ಡಿ ಸೂಚನೆ ಮೇರೆಗೆ ಸಂಚು: ಸಿಬಿಐ