ನವದೆಹಲಿ: ಲಂಚ ಪಡೆದ ಆರೋಪದಡಿ ಅಮಾನತುಗೊಂಡಿದ್ದ ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳಾದ ಎಸ್‌ಪಿ ವಿಶಾಲ್ ಗರ್ಗ್ ಮತ್ತು ಇನ್ಸ್‌ಪೆಕ್ಟರ್ ಮೊಹಮ್ಮದ್ ರಜೀಬ್ ಖಾನ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಫ್‌ಐಆರ್ ದಾಖಲಿಸಿದೆ. ಈ ಇಬ್ಬರೂ ಅಧಿಕಾರಿಗಳು ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದಿಂದ ಏಪ್ರಿಲ್ 25 ರಂದು ಅಮಾನತು ಶಿಕ್ಷೆಗೆ ಒಳಪಟ್ಟಿದ್ದರು.
ಮಣಿಪುರದ ಕಛೇರಿಯಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಕಾರ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಆಗಿನ ಎಸ್ಪಿಯಾಗಿದ್ದ ವಿಶಾಲ್ ಗರ್ಗ್, ಇನ್ಸ್‌ಪೆಕ್ಟರ್ ಮೊಹಮ್ಮದ್ ರಜೀಬ್ ಖಾನ್ ವಿರುದ್ಧ ದೂರು ಸ್ವೀಕರಿಸಿದ್ದೇವೆ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸ್‌ಪಿ ವಿಶಾಲ್ ಗರ್ಗ್ ಮತ್ತು ಇನ್ಸ್‌ಪೆಕ್ಟರ್ ಮೊಹಮ್ಮದ್ ರಜೀಬ್ ಖಾನ್ ಅಲ್ಲಿನ ಸ್ಥಳೀಯ ನಿವಾಸಿಗಳ ಜೊತೆ ಎನ್‌ಐಎ ಪ್ರಕರಣಗಳಲ್ಲಿ ಸಿಲುಕಿಸಲಾಗುವುದು ಎಂದು ಬೆದರಿಸಿ ಅಪಾರ ಪ್ರಮಾಣದ ಹಣ ವಸೂಲಿ ಮಾಡುತ್ತಿದ್ದರು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ ಎಂದು ಎನ್‌ಐಎ ದೂರಿನಲ್ಲಿ ಉಲ್ಲೇಖಿಸಿದೆ.
ಭಯೋತ್ಪಾದಕ ಸಂಘಟನೆಗಳ ಸಕ್ರಿಯ ಕಾರ್ಯಕರ್ತರು ಎಂಬ ಆರೋಪದ ಮೇಲೆ ಎನ್‌ಐಎ 2022 ರಲ್ಲಿ ಎಫ್‌ಐಆರ್ UAPA ಅಡಿ ನಿಷೇಧಿಸಲಾಗಿರುವ ಕಾಂಗ್ಲೀಪಕ್ ಕಮ್ಯುನಿಸ್ಟ್ ಪಾರ್ಟಿ (ಕೆಸಿಪಿ), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಮತ್ತು ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಪಿಆರ್‌ಇಪಿಎಕೆ) ಮೇಲೆ ದಾಖಲಿಸಿತ್ತು. ಇವರು ಮಣಿಪುರದಲ್ಲಿ ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಹಣ ಸಂಗ್ರಹಿಸುತ್ತಿದ್ದ ಪ್ರಕರಣದ ತನಿಖೆಯನ್ನು ಮುಖ್ಯ ತನಿಖಾ ಅಧಿಕಾರಿ ತುಷಾರ್ ಬಿಶ್ತ್ ಅವರಿಗೆ ವಹಿಸಲಾಯಿತು.