ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ 'ಟೆಂಡರ್ ನಂತರ ಪರವಾನಗಿದಾರರಿಗೆ ಅನಗತ್ಯ ಅನುಕೂಲಗಳನ್ನು ನೀಡುವ ಉದ್ದೇಶದಿಂದ ಈ ಹೊಸ ಅಬಕಾರಿ ನೀತಿ ಪರಿಚಯಿಸಲಾಗಿದೆ. ಜೊತೆಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಬಕಾರಿ ನೀತಿಯಲ್ಲಿ ಹಲವಾರು ಬದಲಾವಣೆ ಮಾಡಿ, ಪರವಾನಗಿದಾರರಿಗೆ ಅನುಚಿತ ಲಾಭಗಳನ್ನು ನೀಡಿದ್ದಾರೆ' ಎಂದು ತಿಳಿಸಿದೆ.
2021-22 ನೇ ಸಾಲಿಗೆ ದೆಹಲಿಯ ಜಿಎನ್‌ಸಿಟಿಡಿಯ ಅಬಕಾರಿ ನೀತಿ ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅಕ್ರಮಗಳು ನಡೆದಿವೆ ಎಂದು ಗೃಹ ಸಚಿವಾಲಯವು ಸಿಬಿಐಗೆ ದೂರು ನೀಡಿದೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆಗಿನ ಅಬಕಾರಿ ಆಯುಕ್ತ ಗೋಪಿ ಕೃಷ್ಣ, ಅಬಕಾರಿ ಇಲಾಖೆ ಉಪ ಆಯುಕ್ತ ಆನಂದ್ ತಿವಾರಿ, ಸಹಾಯಕ ಕಮಿಷನರ್ ಪಂಕಜ್ ಭಟ್ನಾಗರ್ ಅವರು 2021-22ನೇ ಸಾಲಿನ ಅಬಕಾರಿ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆಯೇ ಪರವಾನಗಿದಾರರಿಗೆ ಅನುಚಿತವಾಗಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಏನಿದು ಪ್ರಕರಣ: ತಜ್ಞರ ಸಮಿತಿಯ ವರದಿಯ ಆಧಾರದಲ್ಲಿ ರೂಪಿಸಲಾದ ಕೇಜ್ರಿವಾಲ್ ಸರ್ಕಾರದ ನೂತನ ಅಬಕಾರಿ ನೀತಿ 2021-22 ಅನ್ನು ಕಳೆದ ವರ್ಷದ ನವಂಬರ್ನಲ್ಲಿ ಜಾರಿಗೊಳಿಸಲಾಗಿತ್ತು. ಮತ್ತು ಅದರಡಿ ನಗರದ 32 ವಲಯಗಳಲ್ಲಿಯ 849 ಮದ್ಯದಂಗಡಿಗಳಿಗಾಗಿ ಖಾಸಗಿ ಬಿಡ್ಡರ್ಗಳಿಗೆ ಚಿಲ್ಲರೆ ಪರವಾನಗಿಗಳನ್ನು ನೀಡಲಾಗಿತ್ತು.
ನೂತನ ನೀತಿಯಡಿ ಅಬಕಾರಿ ಇಲಾಖೆಯು ವರ್ಷವೊಂದರಲ್ಲಿ ಮದ್ಯರಹಿತ ದಿನಗಳ ಸಂಖ್ಯೆಯನ್ನು 21ರಿಂದ 3ಕ್ಕೆ ತಗ್ಗಿಸಿತ್ತು. ಚಿಲ್ಲರೆ ಮದ್ಯ ಮಾರಾಟ ಕ್ಷೇತ್ರದಿಂದ ಸರ್ಕಾರವು ನಿರ್ಗಮಿಸಿತ್ತು. ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ನಸುಕಿನ ಮೂರು ಗಂಟೆಯವರೆಗೆ ತೆರೆದಿಡಲು ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಮದ್ಯದ ಮೇಲೆ ರಿಯಾಯಿತಿಗಳು ಮತ್ತು ಯೋಜನೆಗಳನ್ನು ಪ್ರಕಟಿಸಲು ಚಿಲ್ಲರೆ ಪರವಾನಗಿದಾರರಿಗೆ ಅನುಮತಿ ನೀಡಲಾಗಿತ್ತು.