ಹೈದರಾಬಾದ್ (ತೆಲಂಗಾಣ): ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ, ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ವೈಎಸ್ ಭಾಸ್ಕರ್ ರೆಡ್ಡಿ, ಉದಯ್ ಕುಮಾರ್ ರೆಡ್ಡಿ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ, ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರಿಗೂ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
2019ರ ಮಾರ್ಚ್ 15ರಂದು ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ ವಿವೇಕಾನಂದ ರೆಡ್ಡಿ ಕೊಲೆ ನಡೆದಿತ್ತು. ಇವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರು. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾಸ್ಕರ್ ರೆಡ್ಡಿ ಕೂಡ ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಾಗಿದ್ದಾರೆ. 2019ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ತಮ್ಮ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಕೊಲೆಯಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವನ್ನು ಸಿಬಿಐ ವ್ಯಕ್ತಪಡಿಸಿದೆ.
ಇದರ ಭಾಗವಾಗಿ ಭಾಸ್ಕರ್ ರೆಡ್ಡಿ ಅವರನ್ನು ಏಪ್ರಿಲ್ 16ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಏಪ್ರಿಲ್ 18ರಂದು ಭಾಸ್ಕರ್ ರೆಡ್ಡಿ ಹಾಗೂ ಮತ್ತೋರ್ವ ಆರೋಪಿ ಉದಯಕುಮಾರ್ ರೆಡ್ಡಿ ಅವರನ್ನು ಆರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮತ್ತೊಂದೆಡೆ, ಭಾಸ್ಕರ್ ರೆಡ್ಡಿ ಪುತ್ರರಾದ ಕಡಪ ಸಂಸದ ಅವಿನಾಶ್ ರೆಡ್ಡಿ ಅವರನ್ನು ಏಪ್ರಿಲ್ 25ರವರೆಗೆ ಬಂಧಿಸುವಂತಿಲ್ಲ. ಆದರೆ, ಸಿಬಿಐ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.
ಆರೋಪಿಗಳಿಗೆ ಪ್ರಶ್ನೆಗಳ ಸುರಿಮಳೆ: ಅಂತೆಯೇ, ಏಪ್ರಿಲ್ 19ರಿಂದ ಭಾಸ್ಕರ್ ರೆಡ್ಡಿ, ಉದಯಕುಮಾರ್ ರೆಡ್ಡಿ ಹಾಗೂ ಅವಿನಾಶ್ ರೆಡ್ಡಿ ಸೇರಿ ಮೂವರನ್ನು ಪ್ರತ್ಯೇಕವಾಗಿ ಸಿಬಿಐ ಅಧಿಕಾರಿಗಳು ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ವಿವೇಕಾನಂದ ರೆಡ್ಡಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೊದಲಿಗೆ ಹೇಳಿದ್ದು ಉದಯಕುಮಾರ್ ರೆಡ್ಡಿ. ಈ ಹತ್ಯೆಯ ವಿಚಾರ ಆತನಿಗೆ ಮೊದಲೇ ತಿಳಿದಿತ್ತು ಎಂದು ಸಿಬಿಐ ಆರೋಪಿಸಿದೆ.