ಮುಂಬೈ (ಮಹಾರಾಷ್ಟ್ರ): ವಿಡಿಯೋಕಾನ್ ಕಂಪನಿ ಸಾಲ ಪ್ರಕರಣದಲ್ಲಿ ಬಂಧಿತರಾದ ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂಡಿ ಚಂದಾ ಕೊಚ್ಚಾರ್ ಮತ್ತು ಪತಿ ದೀಪಕ್ ಕೊಚ್ಚಾರ್ ದಂಪತಿಯನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.
ವಿಡಿಯೋಕಾನ್ ಗ್ರೂಪ್ ಕಂಪನಿ ಮತ್ತು ಐಸಿಐಸಿಐ ಬ್ಯಾಂಕ್ ನಡುವಿನ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಶುಕ್ರವಾರ ರಾತ್ರಿ ಚಂದಾ ಕೊಚ್ಚಾರ್ ಮತ್ತು ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಇಂದು ಮುಂಬೈನಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕೊಚ್ಚಾರ್ ದಂಪತಿಯನ್ನು ಸಿಬಿಐ ಅಧಿಕಾರಿಗಳು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚಾರ್ 4ನೇ ಆರೋಪಿ ಮತ್ತು ಪತಿ ದೀಪಕ್ ಐದನೇ ಆರೋಪಿಯಾಗಿದ್ದಾರೆ. 4ನೇ ಆರೋಪಿ 2009ರಲ್ಲಿ ಐಸಿಐಸಿಐನ ಎಂಡಿ ಮತ್ತು ಸಿಇಒ ಆಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೇ, ಚಂದಾ ಕೊಚ್ಚಾರ್ ಬ್ಯಾಂಕಿನ ಎಂಡಿ ಮತ್ತು ಸಿಇಒ ಆದ ನಂತರ ವೀಡಿಯೊಕಾನ್ ಮತ್ತು ಅದರ ಅಂಗಸಂಸ್ಥೆ ಕಂಪನಿಗಳಿಗೆ ಆರು ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಎರಡು ಸಾಲಗಳನ್ನು ಮಂಜೂರು ಮಾಡಿದ ಸಮಿತಿಗಳಲ್ಲಿ ಚಂದಾ ಭಾಗವಾಗಿದ್ದರು. ಇದರಲ್ಲಿ 1,800 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಕಂಪನಿಗೆ ನೀಡಲಾಗಿದೆ. ಜೊತೆಗೆ ದೀಪಕ್ ಕೊಚ್ಚರ್ ಭಾಗವಗಿರುವ ಕಂಪನಿಗೆ 300 ಕೋಟಿ ರೂಪಾಯಿ ಮೊತ್ತದ ಮತ್ತೊಂದು ಸಾಲವನ್ನು ನೀಡಲಾಗಿದೆ ಎಂದು ಉಲ್ಲೇಖಿಸಿದರು.
ಈ ಸಂಬಂಧ ಸಿಆರ್ಪಿಸಿ ಸೆಕ್ಷನ್ 41ರ ಅಡಿಯಲ್ಲಿ ಇಬ್ಬರೂ ಆರೋಪಿಗಳಿಗೆ ವಿಚಾರಣೆಗೆ ಹಜಾರಾಗುವಂತೆ ನೋಟಿಸ್ ನೀಡಿದ್ದೇವೆ. ಡಿಸೆಂಬರ್ 15ರಂದು ದಂಪತಿಗೆ ಹಾಜರಾಗುವಂತೆ ನೋಟಿಸ್ ಕೊಡಲಾಗಿತ್ತು. ಆಗ ನಾಲ್ಕು ದಿನಗಳ ನಂತರ ಹಾಜರಾಗುವುದಾಗಿ ಹೇಳಿದ್ದರು. ಆದರೂ, ಹಾಜರಾಗಿರಲಿಲ್ಲ. ನಿನ್ನೆ (ಡಿಸೆಂಬರ್ 23) ವಿಚಾರಣೆಗೆ ಬಂದಿದ್ದರೂ, ಅಸಹಕಾರದ ಕಾರಣ ಅವರನ್ನು ಬಂಧಿಸಲಾಗಿದೆ. ಆದ್ದರಿಂದ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳಿಬ್ಬರನ್ನೂ ಮೂರು ದಿನಗಳ ಕಸ್ಟಡಿಗೆ ನೀಡಬೇಕೆಂದು ಸಿಬಿಐ ವಕೀಲರು ವಾದಿಸಿದರು.
ಇತ್ತ, ಕೊಚ್ಚಾರ್ ದಂಪತಿಯ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, ದಾಖಲಾದ ಎಫ್‌ಐಆರ್‌ನಲ್ಲಿ ವಿಡಿಯೋಕಾನ್ ಗ್ರೂಪ್‌ನ ಕೈಗಾರಿಕೋದ್ಯಮಿ ವೇಣುಗೋಪಾಲ್ ಧೂತ್ ಹೆಸರು ಕೂಡ ಇದೆ. ಇತ್ತ, ಎಫ್‌ಐಆರ್ ದಾಖಲಾಗಿ ವರ್ಷಗಳೇ ಕಳೆದರೂ ಕೊಚ್ಚರ್ ದಂಪತಿಯನ್ನು ತನಿಖೆಗೆ ಹಾಜರಾಗುವಂತೆ ಕರೆದಿರಲಿಲ್ಲ. ಇದ್ದಕ್ಕಿದ್ದಂತೆ ಡಿಸೆಂಬರ್ 15ಕ್ಕೆ ನೋಟಿಸ್ ಕಳುಹಿಸಿದೆ. ಅಲ್ಲದೇ, 2019ರ ಜನವರಿಯವರೆಗೆ ತನಿಖೆ ಅಗತ್ಯವೇ ಇರಲಿಲ್ಲ. ಈಗ ಅವರನ್ನು ಏಕೆ ಬಂಧಿಸಲಾಗಿದೆ ಎಂದು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ: ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್ ಅವರಿಗೆ ಅನಧಿಕೃತವಾಗಿ ಸಾಲ ನೀಡಿದ ಆರೋಪ ಚಂದಾ ಕೊಚ್ಚಾರ್ ಮೇಲಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಹಾಗೂ ಆರ್‌ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕಿನ ಸಾಲ ನೀತಿಯನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್‌ನ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದ ಆರೋಪ ಕೊಚ್ಚಾರ್ ಎದುರಿಸುತ್ತಿದ್ದಾರೆ.
ಐಸಿಐಸಿಐ ಬ್ಯಾಂಕ್‌ನಲ್ಲಿ ಚಂದಾ ಕೊಚ್ಚಾರ್ ಅಧಿಕಾರಾವಧಿಯಲ್ಲಿ ಅಂದರೆ 2009-11ರ ಅವಧಿಯಲ್ಲಿ ವಿಡಿಯೋಕಾನ್ ಗ್ರೂಪ್ ಮತ್ತು ಅದರ ಸಂಬಂಧಿತ ಕಂಪನಿಗಳಿಗೆ 1,875 ಕೋಟಿ ರೂಪಾಯಿ ಮೌಲ್ಯದ ಆರು ಸಾಲಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಾಲಗಳಲ್ಲಿ ಹೆಚ್ಚಿನವು ಅನುತ್ಪಾದಕ ಆಸ್ತಿಗಳಾಗಿ ಮಾರ್ಪಟ್ಟಿವೆ, ಇದರಿಂದಾಗಿ ಬ್ಯಾಂಕ್‌ಗೆ 1,730 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ. 2009 ಮೇ 1ರಂದು, ಚಂದಾ ಕೊಚ್ಚರ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ:ಐಸಿಐಸಿಐ ಮಾಜಿ ಎಂಡಿ ಅರೆಸ್ಟ್ ಮಾಡಿದ ಸಿಬಿಐ.. ಏನಿದು ಪ್ರಕರಣ?