ನವದೆಹಲಿ:ಯುಕೋ ಬ್ಯಾಂಕ್ನ 41 ಸಾವಿರ ಖಾತೆದಾರರಿಗೆ ತಪ್ಪಾಗಿ 820 ಕೋಟಿ ರೂ.ಗಳ ಜಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕರ್ನಾಟಕದ ಮಂಗಳೂರು, ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ 13 ಕಡೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದೆ. ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ:ತಾಂತ್ರಿಕ ದೋಷ: ಗ್ರಾಹಕರ ಬ್ಯಾಂಕ್ ಖಾತೆಗಳಿಗೆ 820 ಕೋಟಿ ರೂಪಾಯಿ ಜಮೆ
ನವೆಂಬರ್ ತಿಂಗಳಲ್ಲಿ ಐಎಂಪಿಎಸ್ (Immediate Payment Service-IMPS) ಮೂಲಕ ಯುಕೋ ಬ್ಯಾಂಕ್ನ ಖಾತೆದಾರರಿಗೆ ಹಣ ಜಮೆಯಾಗಿತ್ತು. ಈ ಕುರಿತು ಮಂಗಳೂರು, ಕೋಲ್ಕತ್ತಾ ಹಾಗೂ ಇತರ ನಗರಗಳಲ್ಲಿ ಸೋಮವಾರ ತಡರಾತ್ರಿಯವರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ. ಬ್ಯಾಂಕ್ನೊಂದಿಗೆ ಕಾರ್ಯನಿರ್ವಹಿಸುವ ಇಬ್ಬರು ಇಂಜಿನಿಯರ್ಗಳು ಹಾಗೂ ಇತರರ ವಿರುದ್ಧ ಯುಕೋ ಬ್ಯಾಂಕ್ ದೂರು ನೀಡಿತ್ತು. ಇದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ವಿವಿಧ ನಗರಗಳಲ್ಲಿ ನಡೆದ ಈ ಶೋಧ ಕಾರ್ಯದ ಸಮಯದಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಈ ವರ್ಷದ ನವೆಂಬರ್ 10 ಮತ್ತು 13ರ ಮಧ್ಯೆ 8.53 ಲಕ್ಷಕ್ಕೂ ಹೆಚ್ಚು ಐಎಂಪಿಎಸ್ ವಹಿವಾಟುಗಳು ನಡೆದಿವೆ. ಇದರಲ್ಲಿ ಖಾಸಗಿ ಬ್ಯಾಂಕ್‌ಗಳ 14,000 ಖಾತೆದಾರರಿಂದ 820 ಕೋಟಿ ರೂ.ಗಳು ಯುಕೊ ಬ್ಯಾಂಕ್ ಗ್ರಾಹಕರ 41,000 ಖಾತೆಗಳಿಗೆ ಜಮೆಯಾಗಿದೆ. ''ವಹಿವಾಟುಗಳು ವಿಫಲವಾಗಿವೆ'' ಎಂದು ಮೂಲ ಬ್ಯಾಂಕ್ ತಿಳಿಸಿದ ಮೇಲೂ ''ತಪ್ಪಾಗಿ'' ಹಣ ಜಮೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರ ಪರಿಣಾಮವಾಗಿ, ಮೂಲ ಬ್ಯಾಂಕ್‌ಗಳ ಖಾತೆದಾರರಿಂದ ಸರಿಯಾದ ಡೆಬಿಟ್ ಇಲ್ಲದೆ ಯುಕೋ ಬ್ಯಾಂಕ್ ಖಾತೆಗಳಿಗೆ ಅಂದಾಜು 820 ಕೋಟಿ ರೂ. ಜಮೆಯಾಗಿದೆ. ಯುಕೋ ಬ್ಯಾಂಕ್ನ ಹಲವಾರು ಗ್ರಾಹಕರು ಈ ವಹಿವಾಟಿನ ಲಾಭ ಪಡೆದು ಮೊತ್ತವನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ಯುಕೋ ಬ್ಯಾಂಕ್, ತಪ್ಪಾಗಿ ಪಾವತಿಯಾದ ಹಣವನ್ನು ಮರುಪಡೆದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿತ್ತು. ಮತ್ತೊಂದೆಡೆ, ಈ ಬೆಳವಣಿಗೆ ನಂತರ ಬ್ಯಾಂಕ್ನ ನಿವ್ವಳ ಲಾಭದಲ್ಲಿ ಶೇ.20ರಷ್ಟು ಕುಸಿತ ಕಂಡಿರುವ ಬಗ್ಗೆ ವರದಿಯಾಗಿತ್ತು.
ಇದನ್ನೂ ಓದಿ:ವ್ಯಕ್ತಿಯ ಬ್ಯಾಂಕ್ ಖಾತೆಗೆ 6 ದಿನದಲ್ಲಿ 6 ಕೋಟಿ ಹಣ ಜಮೆ: ಮುಂದಾಗಿದ್ದೇನು ಗೊತ್ತಾ?