ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ಇಬ್ಭಾಗಿಸಿ ಬಿಜೆಪಿಯೊಂದಿಗೆ ಸೇರ್ಪಡೆಯಾದರೆ ತಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಸಮಾಪ್ತಿ ಮಾಡುವುದಾಗಿ ಬಿಜೆಪಿ ಆಫರ್ ನೀಡಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಗಂಭೀರ ಆಪಾದನೆ ಮಾಡಿದ್ದಾರೆ. ಎಎಪಿ ಸರ್ಕಾರದ ಹಿಂದಿನ ಅಬಕಾರಿ ನೀತಿ ಕುರಿತಾಗಿ ಸಿಸೋಡಿಯಾ ಅವರನ್ನು ಸಿಬಿಐ ತೀವ್ರ ವಿಚಾರಣೆಗೊಳಪಡಿಸಿರುವ ಬೆನ್ನಲ್ಲೇ ಸಿಸೋಡಿಯಾ ಅವರ ಆರೋಪ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಆಪ್ ತೊರೆದು ಬಿಜೆಪಿಗೆ ಬನ್ನಿ ಎಂದು ಬಿಜೆಪಿಯಿಂದ ನನಗೆ ಸಂದೇಶ ಬಂದಿದೆ. ನಿಮ್ಮ ವಿರುದ್ಧದ ಎಲ್ಲ ಸಿಬಿಐ ಮತ್ತು ಇಡಿ ಕೇಸುಗಳನ್ನು ಮುಕ್ತಾಯಗೊಳಿಸುವ ಭರವಸೆ ನೀಡುತ್ತೇವೆ ಎಂದು ಸಂದೇಶ ಬಂದಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ನಾನೊಬ್ಬ ರಜಪೂತನಾಗಿದ್ದು, ಮಹಾರಾಣಾ ಪ್ರತಾಪ್ ಅವರ ವಂಶಜನಾಗಿದ್ದೇನೆ. ನನ್ನ ತಲೆ ಕತ್ತರಿಸಿದರೂ ಸರಿ, ಭ್ರಷ್ಟರು ಮತ್ತು ಸಂಚುಕೋರರ ಎದುರು ತಲೆ ಬಾಗಿಸಲಾರೆ. ನನ್ನ ವಿರುದ್ಧದ ಎಲ್ಲ ಪ್ರಕರಣಗಳು ಸುಳ್ಳು ಎಮದಿರುವ ಸಿಸೋಡಿಯಾ, ಬಿಜೆಪಿ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಎಎಪಿ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಇದೆಲ್ಲ ರಾಜಕೀಯ ಪ್ರೇರಿತ ಎಂದು ಹೇಳಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಹಣದುಬ್ಬರ ಮತ್ತು ನಿರುದ್ಯೋಗಗಳು ಗಗನಕ್ಕೇರುತ್ತಿರುವ ಮಧ್ಯೆ ದೇಶದಾದ್ಯಂತ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.