ಹೈದರಾಬಾದ್:ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಸಂಚಿನಲ್ಲಿ ಆರೋಪಿಗಳಾದ ವೈಎಸ್ ಭಾಸ್ಕರ್ ರೆಡ್ಡಿ ಹಾಗೂ ಉದಯಕುಮಾರ್ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ಸೋಮವಾರ ಹೈದರಾಬಾದ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಇಬ್ಬರೂ ಆರೋಪಿಗಳು ಸಾಕ್ಷ್ಯ ನಾಶಪಡಿಸಿ, ವಿವೇಕ ಹತ್ಯೆಯನ್ನು ಮುಚ್ಚಿಹಾಕಲು ಯತ್ನಿಸಿದ್ದು, ಇದೊಂದು ಸಹಜ ಸಾವು ಎಂದು ಎಲ್ಲರೂ ನಂಬುವಂತೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ಭಾಸ್ಕರ್ ರೆಡ್ಡಿ ಮತ್ತು ಉದಯಕುಮಾರ್ ರೆಡ್ಡಿಗೆ ಸಿಬಿಐ ಸಲ್ಲಿಸಿದ್ದ ಕಸ್ಟಡಿ ಅರ್ಜಿಯ ವೇಳೆ ಈ ವಿಷಯ ಬಹಿರಂಗವಾಗಿದೆ.
ವಿವೇಕ ಹತ್ಯೆ ಪ್ರಕರಣದಲ್ಲಿ ಹಲವರ ಕೈವಾಡ:ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ಮುಖ್ಯ ನ್ಯಾಯಾಲಯದ ನ್ಯಾಯಾಧೀಶ ಸಿ.ಎಚ್.ರಮೇಶ್ ಬಾಬು ಅವರು ಸೋಮವಾರ ನೀಡಬೇಕಿದ್ದ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿದರು. ಕಸ್ಟಡಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಸಿಬಿಐ ಪರ ವಕೀಲರು ವಾದ ಮಂಡಿಸಿ, ''2017ರ ಎಂಎಲ್‌ಸಿ ಚುನಾವಣೆಯಲ್ಲಿ ವಿವೇಕ ಸೋತಿದ್ದರು. ಭಾಸ್ಕರ ರೆಡ್ಡಿ ಹಾಗೂ ಮತ್ತೊಬ್ಬ ಆರೋಪಿ ಶಿವಶಂಕರ ರೆಡ್ಡಿ ಅವರ ಸೋಲಿಗೆ ಶ್ರಮಿಸಿದರು. ವಿವೇಕ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನದ ಭಾಗವಾಗಿ ಈ ರಾಜಕೀಯ ಸಂಚು ನಡೆದಿದೆ. ಭಾಸ್ಕರ ರೆಡ್ಡಿ ಸೇರಿದಂತೆ ಹಲವರು ಈ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.
ಹತ್ಯೆ ಪ್ರಕರಣದ ಸಂಚು ರೂಪಿಸಿದ್ದ ಆರೋಪಿಗಳು:ವಿವೇಕ ಹತ್ಯೆಗೆ ಪ್ರತಿಯಾಗಿ ಶಿವಶಂಕರ ರೆಡ್ಡಿ ಮತ್ತು ಇತರರು 40 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಗಂಗಿರೆಡ್ಡಿ ಹೇಳಿದ್ದರು ಎಂದು ನ್ಯಾಯಾಲಯಕ್ಕೆ ಸಿಬಿಐ ಹೇಳಿದೆ. ವಿವೇಕ ಅವರು ಹೃದಯಾಘಾತದಿಂದ ರಕ್ತ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಸೃಷ್ಟಿ ಮಾಡಲಾಗಿದೆ. ಆರೋಪಿಗಳಾದ ಭಾಸ್ಕರ ರೆಡ್ಡಿ, ಅವಿನಾಶ್ ರೆಡ್ಡಿ, ಶಿವಶಂಕರರೆಡ್ಡಿ ಮತ್ತು ಉದಯಕುಮಾರ್ ರೆಡ್ಡಿ ಈ ಪ್ರಕರಣದ ಸಂಚು ರೂಪಿಸಿದ್ದರು ಎಂದು ಸಿಬಿಐ ತಿಳಿಸಿದೆ.
ಉದಯಕುಮಾರ್ ರೆಡ್ಡಿಗೆ ವಿವೇಕ ಹತ್ಯೆಯ ಸುಳಿವಿತ್ತು: ಉದಯಕುಮಾರ್ ರೆಡ್ಡಿಗೆ ಕೊಲೆಯ ಬಗ್ಗೆ ಮೊದಲೇ ತಿಳಿದಿತ್ತು. ಕೊಲೆಯಾದ ದಿನ ಬೆಳಗ್ಗೆ 4 ಗಂಟೆಗೆ ಅವನು ಹೊರಗೆ ಹೋಗಿದ್ದ ಎಂದು ಆತನ ತಾಯಿ ಹೇಳಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ''ವಿವೇಕ ಕೊಲೆಯಾದ ದಿನ ಬೆಳಗಿನ ಜಾವ 3.35ಕ್ಕೆ ಹೊರಗೆ ಹೋಗಿದ್ದ ಉದಯಕುಮಾರ್ ರೆಡ್ಡಿ 4.01ಕ್ಕೆ ಪುಲಿವೆಂದುಲಕ್ಕೆ ವಾಪಸಾಗಿರುವುದು ಕಂಡು ಬಂದಿದೆ. ಗಂಗಿರೆಡ್ಡಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ ಗಜ್ಜಲ ಜಯಪ್ರಕಾಶ್ ರೆಡ್ಡಿಗೆ ಹತ್ತಿ ಹಾಗೂ ಬ್ಯಾಂಡೇಜ್ ವ್ಯವಸ್ಥೆ ಮಾಡುವಂತೆ ಉದಯಕುಮಾರ್ ರೆಡ್ಡಿ ಕರೆ ಮಾಡಿದ್ದರು. ಶಿವಶಂಕರರೆಡ್ಡಿ, ವೈ.ಎಸ್. ಭಾಸ್ಕರ ರೆಡ್ಡಿ ಮತ್ತು ಗಂಗಿರೆಡ್ಡಿ ಅವರ ಸೂಚನೆ ಮೇರೆಗೆ ಜಯಪ್ರಕಾಶ್ ರೆಡ್ಡಿ ವಿವೇಕಗೆ ಬ್ಯಾಂಡೇಜ್ ಹಾಕಿ ಗಾಯಗಳನ್ನು ಮುಚ್ಚಿದ್ದರು ಎಂದು ಸಿಬಿಐ ತಿಳಿಸಿದೆ.
ಸಿಬಿಐ ವಿರುದ್ಧ ಆರೋಪಿಗಳ ಪರ ವಾದವೇನು?:ಇದಕ್ಕೂ ಮುನ್ನ ಆರೋಪಿಗಳಾದ ವೈ.ಎಸ್.ಭಾಸ್ಕರ ರೆಡ್ಡಿ ಹಾಗೂ ಉದಯಕುಮಾರ್ ರೆಡ್ಡಿ ಪರ ವಕೀಲರು ವಿಭಿನ್ನ ವಾದ ಮಂಡಿಸಿ, ತಮ್ಮ ಕಕ್ಷಿದಾರರನ್ನು ಗುರಿಯಾಗಿಸಿಕೊಂಡು ಸಿಬಿಐ ತನಿಖೆ ಮುಂದುವರಿಸಿದೆ. ತಮಗೆ ಇಷ್ಟ ಬಂದವರನ್ನು ಆರೋಪಿಗಳನ್ನಾಗಿ ಮಾಡಲಾಗುತ್ತಿದೆ. ಮತ್ತೆ ಬೇರೆ ಯಾರನ್ನಾದರೂ ಬಂಧಿಸುವ ಆತಂಕ ಎದುರಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿದಾರರ ಉಲ್ಲೇಖವಿಲ್ಲ. ಅಸಹಕಾರ ಬಂಧನ ಸರಿಯಲ್ಲ''ಎಂದು ವಾದ ಮಂಡಿಸಿದರು.
''ಭಾಸ್ಕರ ರೆಡ್ಡಿ ಎಂಬ 75 ವರ್ಷದ ವ್ಯಕ್ತಿಯನ್ನು ಹಲವು ಬಾರಿ ವಿಚಾರಣೆಗೆ ಕರೆಯಲಾಗಿತ್ತು. ಅಸಹಕಾರ ಆರೋಪ ಬಿಟ್ಟರೆ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಸಿಬಿಐ ಮೊದಲು ಸಲ್ಲಿಸಿದ ಎರಡು ಚಾರ್ಜ್‌ಶೀಟ್‌ಗಳಲ್ಲಿ ಭಾಸ್ಕರ್ ರೆಡ್ಡಿ ಉಲ್ಲೇಖವಿಲ್ಲ. ಸುಳ್ಳು ಸಾಕ್ಷ್ಯದೊಂದಿಗೆ ಭಾಸ್ಕರ ರೆಡ್ಡಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ. ಭಾಸ್ಕರ ರೆಡ್ಡಿ ಅವರ ಆರೋಗ್ಯ ಸರಿಯಿಲ್ಲ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು'' ಎಂದು ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ:'ಎನ್ಟಿಆರ್ 30' ಅಡ್ಡಾಗೆ ಸೈಫ್ ಅಲಿ ಖಾನ್ ಎಂಟ್ರಿ: ಹೈ ವೋಲ್ಟೇಜ್ ಶೂಟಿಂಗ್ ಶುರು!